Breaking News

ಪತಿರನ ಬೌಲಿಂಗ್​ಗಾಗಿ 4 ನಿಮಿಷ ಆಟ ನಿಲ್ಲಿಸಿದ ಧೋನಿ!: ಗವಾಸ್ಕರ್​ ಪ್ರತಿಕ್ರಿಯೆ ಹೀಗಿದೆ..

Spread the love

ಚೆನ್ನೈ: ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ ಪಂದ್ಯದ ವೇಳೆ ಮೈದಾನದಲ್ಲಿ ಮಾಡುವ ಚಾಣಾಕ್ಷ ತಂತ್ರಗಳು ಒಂದೆರಡಲ್ಲ.

ಅವುಗಳು ಎದುರಾಳಿ ತಂಡವನ್ನು ಸೋಲಿನ ದವಡೆಗೆ ಸಿಲುಕಿಸುತ್ತವೆ. ಆದರೆ, ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ತಂಡದ ಬೌಲರ್​ಗಾಗಿ ನಾಲ್ಕು ನಿಮಿಷ ಆಟವನ್ನು ಬೇಕಂತಲೇ ನಿಲ್ಲಿಸಿದ್ದರು. ಧೋನಿ ತಳೆದ ಈ ನಿರ್ಧಾರ ಚರ್ಚೆಗೀಡು ಮಾಡಿದೆ. ಇದು ದೋನಿಯದ್ದಲ್ಲ, ಅಂಪೈರ್​ಗಳ ತಪ್ಪು ಎಂದು ಹಿರಿಯ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ಟೀಕಿಸಿದ್ದಾರೆ.

ಏನಾಯ್ತು?: ಗುಜರಾತ್​ ವಿರುದ್ಧದ ಪಂದ್ಯದಲ್ಲಿ 16 ನೇ ಓವರ್​ ಎಸೆಯಲು ಮಥೀಶ್​ ಪತಿರನ ಬೌಲ್​ ಪಡೆದಾಗ ಅಂಪೈರ್​ಗಳು ತಡೆದರು. ಆಗ ನಾಯಕ ಧೋನಿ ಅಂಪೈರ್​ಗಳಾದ ಅನಿಲ್​ ಚೌಧರಿ, ಕ್ರಿಸ್​ ಗ್ಯಾಫನಿ ಬಳಿಗೆ ಬಂದು ಪ್ರಶ್ನಿಸಿದರು. ಪತಿರನ ಆಟದ ಮಧ್ಯೆ 9 ನಿಮಿಷ ಹೊರಗಿದ್ದರು. ಈಗ ನೇರವಾಗಿ ಬೌಲ್​ ಮಾಡಲು ಬಂದಿದ್ದು, ನಿಯಮಗಳ ವಿರುದ್ಧವಾಗಿದೆ. ಬೌಲ್​ ಮಾಡಬೇಕಾದಲ್ಲಿ ಅಷ್ಟೇ ನಿಮಿಷಗಳು ಆಟಗಾರ ಮೈದಾನದಲ್ಲಿ ಕಳೆಯಬೇಕು. ಹೀಗಾಗಿ ಬೌಲಿಂಗ್​ಗೆ ಅನುಮತಿಸಲಾಗಲ್ಲ ಎಂದಿದ್ದಾರೆ.

ಈ ವೇಳೆ ಧೋನಿ ಪತಿರನ ಬೌಲಿಂಗ್​ಗಾಗಿ ಅಂಪೈರ್​ಗಳನ್ನು ಕೋರಿದ್ದಾರೆ. ಇನ್ನೂ 4 ನಿಮಿಷಗಳು ಕಳೆದಲ್ಲಿ ಬೌಲಿಂಗ್ ಮಾಡಲು ಸಾಧ್ಯ ಎಂದು ರೂಲ್ಸ್​ ಹೇಳಿದರು. ಪತಿರನ ಹೊರತಾಗಿ ತುಷಾರ್​ ದೇಶಪಾಂಡೆಗೆ 3 ಓವರ್​ಗಳು ಬಾಕಿ ಇದ್ದವು. ಅಲ್ಲದೇ, ರವೀಂದ್ರ ಜಡೇಜಾ, ಮಹೇಶ್​ ತೀಕ್ಷಣ, ದೀಪಕ್​ ಚಹರ್​ ತಲಾ 4 ಓವರ್​ ಎಸೆದಿದ್ದರು. ಬೇರೊಂದು ಆಯ್ಕೆಯಾಗಿ ಮೊಯಿನ್​ ಅಲಿ ಮಾತ್ರ ಉಳಿದಿದ್ದರು. ಆದರೆ, 30 ಎಸೆತಗಳಲ್ಲಿ 71 ರನ್​ ಅಗತ್ಯವಿದ್ದಾಗ ಸ್ಪಿನ್ನರ್​ಗೆ ಬೌಲ್​ ನೀಡಲು ಧೋನಿ ಹಿಂದೇಟು ಹಾಕಿದರು.

4 ನಿಮಿಷ ಆಟ ಸ್ಥಗಿತ: ಅಂಪೈರ್​ಗಳ ಜೊತೆಗೆ ಮಾತನಾಡುತ್ತಲೇ ಧೋನಿ 4 ನಿಮಿಷಗಳ ಕಾಲ ಆಟವನ್ನು ನಿಲ್ಲಿಸಿದರು. ಈ ವೇಳೆ ಅಂಪೈರ್​ಗಳು ಧೋನಿ ಮತ್ತು ಇತರೆ ಆಟಗಾರರೊಂದಿಗೆ ಮಾತನಾಡುತ್ತಲೇ ಇದ್ದರು. ಸಮಯ ಕಳೆದ ಬಳಿಕ ಪತಿರನ ಬೌಲಿಂಗ್​ಗೆ ಇಳಿದರು. ಚೆನ್ನೈ ನಾಯಕನ ಈ ನಿರ್ಧಾರ ಪ್ರಶ್ನಾರ್ಹವಾಗಿದೆ. ಬೌಲರ್​ ಒಬ್ಬರಿಗಾಗಿ ಇಡೀ ಪಂದ್ಯವನ್ನು 4 ನಿಮಿಷಗಳ ಕಾಲ ನಿಲ್ಲಿಸಿದ್ದು ಚರ್ಚೆಗೀಡು ಮಾಡಿದೆ.

ಅಂಪೈರ್​ಗಳು ನಿರ್ಣಯಿಸಬೇಕಿತ್ತು: ಈ ಕುರಿತಂತೆ ಮಾತನಾಡಿರುವ ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಆಟದ ಸಮಯದಲ್ಲಿ ಅಂಪೈರ್‌ಗಳು ದೃಢ ನಿರ್ಧಾರ ತಳೆಯಬೇಕು. ಫೀಲ್ಡ್​ನಲ್ಲಿ ಅಂಪೈರ್ ನಿರ್ಧಾರವನ್ನು ಎಲ್ಲರೂ ಒಪ್ಪಬೇಕು. ಇದು ನಿಯಮ. ಹೀಗಿದ್ದಾಗ ಧೋನಿ ಏನು ಮಾಡಿದರು ಎಂಬುದಕ್ಕಿಂತಲೂ ಅಂಪೈರ್​ಗಳು ಯಾಕೆ ಮೃದು ಧೋರಣೆ ತೋರಿದರು ಎಂದು ಪ್ರಶ್ನಿಸಿದರು.

ಧೋನಿ ಆಗಿರುವ ಕಾರಣದಿಂದಲೇ ಅಂಪೈರ್​ಗಳು ಇಷ್ಟು ಮೃದುವಾಗಿ ವರ್ತಿಸಿದ್ದಾರೆ. ಆ ಜಾಗದಲ್ಲಿ ಬೇರೆ ಯಾರಾದರೂ ಇದ್ದರೆ, ಬೇರೆ ರೀತಿಯೇ ನಡೆಯುತ್ತಿತ್ತು. ಎಂ.ಎಸ್. ಧೋನಿ ಕಡೆಗೆ ಬೆರಳು ತೋರಿಸುವ ಅಗತ್ಯವಿಲ್ಲ. ಬದಲಿಗೆ ಅಂಪೈರ್‌ಗಳನ್ನು ಇಲ್ಲಿ ಪ್ರಶ್ನಿಸಬೇಕಿದೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ