ಬೆಂಗಳೂರು(ಮೇ.23): ಕರ್ನಾಟಕದಲ್ಲಿ ಅಧಿಕಾರ ಸ್ವೀಕರಿಸಿದ ತಕ್ಷಣ ಸಿಎಂ ಸಿದ್ದರಾಮಯ್ಯ (CM Siddaramaiah) ಕಾರ್ಯಪ್ರವೃತ್ತರಾಗಿರುವುದು ಕಂಡು ಬರುತ್ತಿದೆ. ಹಿಂದಿನ ಬಿಜೆಪಿ ಸರಕಾರ ಆರಂಭಿಸಿದ್ದ ಬಾಕಿ ಇರುವ ಎಲ್ಲಾ ಕಾಮಗಾರಿಗಳಿಗೆ ಕಡಿವಾಣ ಹಾಕಿದ್ದಾರೆ. ಇದರೊಂದಿಗೆ ಹಣ ಬಿಡುಗಡೆಗೂ ನಿರ್ಬಂಧ ಹೇರಲಾಗಿದೆ. ಇತ್ತೀಚೆಗಷ್ಟೇ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Elerctions) ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದುಕೊಂಡು ರಾಜ್ಯದಲ್ಲಿ ಸ್ವಂತ ಬಲದಿಂದ ಸರ್ಕಾರ ರಚನೆ ಮಾಡಿರುವುದು ಗಮನಾರ್ಹ. 66 ಸ್ಥಾನಗಳನ್ನು ಪಡೆದ ಬಿಜೆಪಿ ಅಧಿಕಾರದಿಂದ ಹೊರಬಿದ್ದಿದೆ. ಮೇ 20 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಡಿಕೆ ಶಿವಕುಮಾರ್ (DK Shivakumar) ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆಂಬುವುದು ಉಲ್ಲೇಖನೀಯ.
ಇನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಹೊರಡಿಸಲಾದ ಆದೇಶದಂತೆ, “ಹಿಂದಿನ ಸರ್ಕಾರವು ಕೈಗೊಂಡ ಎಲ್ಲಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳು ಮತ್ತು ನಿಗಮಗಳು/ಮಂಡಳಿಗಳು/ಇಲಾಖೆಗಳ ಎಲ್ಲಾ ಮುಂದಿನ ಬಿಡುಗಡೆ/ಪಾವತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಬೇಕು. ಪ್ರಾರಂಭಿಸದಿರುವುನ್ನೂ ತಡೆಹಿಡಿಯಬೇಕು ಎನ್ನಲಾಗಿದೆ. ಸಿಎಂಒ ಪ್ರಕಾರ, ಬಿಜೆಪಿಯಿಂದ ಮಂಜೂರಾದ ಹಲವಾರು ಕಾಮಗಾರಿಗಳಿಗೆ ಪಾವಿತ್ರ್ಯತೆ ಇಲ್ಲ ಮತ್ತು ಯಾವುದೇ ಅನುಮೋದನೆ ಇಲ್ಲ ಎಂದು ಶಾಸಕರು ಮತ್ತು ಜನರು ನೀಡಿದ ದೂರಿನ ಆಧಾರದ ಮೇಲೆ ಸಿದ್ದರಾಮಯ್ಯ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.