ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಾತ್ಯತೀತ ಜನತಾ ದಳ ಹೀನಾಯ ಸೋಲು ಕಂಡಿದ್ದು, ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ.
ಮೇ 20 ರಂದು ನಗರದ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ 8 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದರು. ಇದರ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ತಮ್ಮ ತಮ್ಮ ನಾಯಕರ ಬೆನ್ನುಬಿದ್ದಿದ್ದಾರೆ. ಇಂತಹ ಆಕಾಂಕ್ಷಿಗಳಿಗೆ ಡಿಸಿಎಂ ಡಿ ಕೆ ಶಿವಕುಮಾರ್ ತಮ್ಮದೇ ಶೈಲಿಯಲ್ಲಿ ಸೂಚನೆಯೊಂದನ್ನು ಕೊಟ್ಟಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡುತ್ತೇವೆ.ಅಧಿಕಾರಕ್ಕಾಗಿ ನಮ್ಮನ್ನು ಮನೆಗೆ ಬಂದು ಭೇಟಿ ಮಾಡಬೇಡಿ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ಲೀಡರ್‌ಶಿಪ್ ಬೇಕು. ಆ ಲೀಡರ್‌ಶಿಪ್ ಇಲ್ಲಿ ತೋರಿಸುವುದು ಅಲ್ಲ. ಸ್ಥಳೀಯ ಮಟ್ಟದಲ್ಲಿ ತೋರಿಸಿ ಪಕ್ಷ ಸಂಘಟಿಸಿ ಎಂದು ಸಚಿವಾಕಾಂಕ್ಷಿಗಳಿಗೆ ಡಿಕೆಶಿ ಖಡಕ್ ಕಿವಿಮಾತು ಹೇಳಿದರು.
ನನಗೆ ಮಂತ್ರಿಯಾಗಿ 30 ವರ್ಷ ಅನುಭವ ಇದೆ. ನನ್ನದೇ ಆದ ವಿಚಾರಗಳಲ್ಲಿ ತೀರ್ಮಾನ ಮಾಡುತ್ತೇನೆ. ಮೊದಲು ನೀವು ಬೂತ್ ಮಟ್ಟದಲ್ಲಿ ಬಲಿಷ್ಠರಾಗಿ. ಸಿದ್ದರಾಮಯ್ಯ ಮನೆ, ನನ್ನ ಮನೆ ಎಂದೆಲ್ಲ ಸುತ್ತುತ್ತಾ ಇರಬೇಡಿ. ಮುಂದಿನ ಪಾರ್ಲಿಮೆಂಟ್ ಚುನಾವಣೆ ನಿಮ್ಮ ಗುರಿಯಾಗಬೇಕು. ಬೂತ್ ಮಟ್ಟದಲ್ಲಿ ಪಕ್ಷ ಸಿದ್ಧಪಡಿಸಿ. ಪಾರ್ಲಿಮೆಂಟ್ಗೂ ಅಸೆಂಬ್ಲಿಗೂ ವ್ಯತ್ಯಾಸ ಇರುತ್ತೆ. ಚುನಾವಣೆಯನ್ನು ತಿಳಿದುಕೊಳ್ಳಿ ಎಂದು ಡಿ ಕೆ ಶಿವಕುಮಾರ್ ಕರೆ ಕೊಟ್ಟರು.
ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ಸಮಾರಂಭನಾನು ಬಂಗಾರಪ್ಪನವರ ಶಿಷ್ಯ, ಎಸ್. ಎಂ. ಕೃಷ್ಣರ ಶಿಷ್ಯ ಅಲ್ಲ. ಬಂಗಾರಪ್ಪನವರ ಜೊತೆ ರಾಜಕಾರಣ ಶುರು ಮಾಡಿದವನು. ಎಲ್ಲರೂ ವೀರೇಂದ್ರ ಪಾಟೀಲ್ರನ್ನು ಇಳಿಸಿದರು, ಹಾಗೆ ಹೀಗೆ ಅಂತಾರೆ. ಆದರೆ ಆವತ್ತು ಅವರ ಆರೋಗ್ಯ ಸ್ಥಿತಿ ಹಾಗಿತ್ತು. ಆದ್ದರಿಂದ ತೀರ್ಮಾನ ಕೈಗೊಂಡರು. ವೀರೇಂದ್ರ ಪಾಟೀಲ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದೆವು. ಗೆದ್ದಾಗ ಅವರೇ ಮುಖ್ಯಮಂತ್ರಿ ಆಗಿದ್ದರು ಎಂದು ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಯಾಕೆ ಇಳಿಸಲಾಗಿತ್ತು ಎಂಬುದರ ಕುರಿತು ಡಿಕೆಶಿ ಇದೇ ಸಂದರ್ಭದಲ್ಲಿ ಸ್ಪಷ್ಟನೆ ಕೊಟ್ಟರು.