ಬೆಳಗಾವಿ: ನಮ್ಮ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದು, 2020 ರಲ್ಲಿಯೇ ತಾವು ತೆಗೆದುಕೊಂಡಿದ್ದ ಹೊಸ ಕಾರಿಗೆ 2023 ಎಂದು ನಂಬರ್ ಪ್ಲೇಟ್ ಹಾಕಿಸಿ ಸ್ಮಶಾನದಲ್ಲಿ ಪೂಜೆ ಸಲ್ಲಿಸಿದ್ದ ಸತೀಶ್ ಜಾರಕಿಹೊಳಿ ಅವರ ಭವಿಷ್ಯ ನಿಜವಾಗಿದ್ದು, ಈಗ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆದ್ದು ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುತ್ತಿದೆ.
ಹೌದು, ಸದಾ ಕಾಲ ಮೌಢ್ಯತೆಗೆ ಸೆಡ್ಡು ಹೊಡೆಯುವ ಮೂಲಕ ವಿವಿಧ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿರುವ ಸತೀಶ್ ಜಾರಕಿಹೊಳಿ ಅವರು ಸಂಪ್ರದಾಯವಾದಿಗಳ ವಿರೋಧವನ್ನು ಕಟ್ಟಿಕೊಂಡಿದ್ದಾರೆ. ಯಾರು ಎಷ್ಟೇ ವಿರೋಧ ಮಾಡಿದರೂ ತಾವು ನಂಬಿರುವ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳಿಂದ ಮಾತ್ರ ಹಿಂದೆ ಸರಿಯದೇ ಮೌಢ್ಯತೆ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.
ಈಗಾಗಲೇ ಸ್ಮಶಾನದಲ್ಲಿ ಹಲವು ಪೂಜೆ, ಪುನಸ್ಕಾರ, ಮದುವೆ ಹಾಗೂ ಶುಭ ಕಾರ್ಯಗಳಿಗೆ ಚಾಲನೆ ನೀಡಿ, ಪೂಜೆಗಳನ್ನು ಮಾಡುತ್ತಿದ್ದ ಸತೀಶ್ ಜಾರಕಿಹೊಳಿ ಅವರನ್ನು ಹೀಯಾಳಿಸಿದ್ದವರೇ ಹೆಚ್ಚು. ಆದರೆ, ಜನರು ಅವರ ಮೇಲೆ ನಂಬಿಕೆ ಇಟ್ಟು ಈ ಬಾರಿಯ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲ್ಲಿಸುವ ಜೊತೆಗೆ, ಅವರು ಮೂರು ವರ್ಷಗಳ ಹಿಂದೆ ನುಡಿದಿದ್ದ ಕಾಂಗ್ರೆಸ್ ಸರ್ಕಾರ ರಚನೆಯ ಭವಿಷ್ಯವನ್ನು ನಿಜವಾಗಿಸಿದ್ದಾರೆ.
ಹೊಸ ಕಾರಿಗೆ 2023 ಎಂದು ನಂಬರ್ ಪ್ಲೇಟ್ ತೆಗೆದುಕೊಂಡು ಮೂಢನಂಬಿಕೆಗಳಿಗೆ ಸೆಡ್ಡು ಹೊಡೆದು ಆ ಕಾರನ್ನು 2020ರಲ್ಲೇ ಸ್ಮಶಾನದಲ್ಲೇ ಲೋಕಾರ್ಪಣೆ ಮಾಡಿದ್ದ ಶಾಸಕ ಸತೀಶ್ ಜಾರಕಿಹೊಳಿ ಅವರ ಭವಿಷ್ಯ ಇಂದು ನಿಜವಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರ 135 ಸ್ಥಾನ ಗೆದ್ದು ರಾಜ್ಯದಲ್ಲಿ ಸರ್ಕಾರ ರಚನೆ ಮಾಡುತ್ತಿದೆ. ಸದಾ ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತುವ ಶಾಸಕ ಸತೀಶ್ ಜಾರಕಿಹೊಳಿ ಅವರು 2020ರಲ್ಲೇ ತಮ್ಮ “ನೂತನ ಕಾರಿಗೆ ಕೆಎ 49 ಎನ್ 2023 ಎಂದು ನಂಬರ್ ಪ್ಲೇಟ್” ತೆಗೆದುಕೊಂಡಿದ್ದರು. ಇದು ಯಾಕೆ ಎಂದು ಪ್ರಶ್ನಿಸಿದ್ದಕ್ಕೆ, 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದರು. ಆಗ ಜನ ಇವರ ಮಾತಿಗೆ ನಕ್ಕು ಸುಮ್ಮನಾಗಿದ್ದರು. ಆದರೆ, ನಿಜವೋ, ಕಾಕತಾಳಿಯವೋ ಇಂದು ಅವರು ಹೇಳಿದ ಭವಿಷ್ಯ ನಿಜವಾಗಿದೆ. ಆಗ ತೆಗೆದುಕೊಂಡು 2023ರ ನಂಬರ್ ಪ್ಲೇಟ್‌ನ ಕಾರಿನಲ್ಲೇ ಅವರು ಪ್ರಯಾಣ ಮಾಡುತ್ತಿದ್ದಾರೆ.
ಇನ್ನು ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯದ ವೇಳೆ ಏಪ್ರಿಲ್ 3ರಂದು ವಿಶೇಷ ವಾಹನವನ್ನು ತಯಾರಿಸಲಾಗಿದ್ದು, ನಾಲ್ಕೈದು ದಿನಗಳಲ್ಲಿ ಸ್ಮಶಾನದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಹೊಳಿ ತಿಳಿಸಿದ್ದರು. ಅದರಂತೆ ಸ್ಮಶಾನದಲ್ಲಿ ವಾಹನ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಕಣಕ್ಕೆ ಇಳಿದಿದ್ದರು. ಜೊತೆಗೆ, ಅಮವಾಸ್ಯೆ ದಿನವೇ ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದಂತೆ ರಾಹುಕಾಲದಲ್ಲಿ ಹೋಗಿ ನಾಮಪತ್ರ ಸಲ್ಲಿಕೆ ಮಾಡಿ ಗೆದ್ದಿದ್ದಾರೆ.
ಒಟ್ಟಿನಲ್ಲಿ ಮೌಢ್ಯತೆಯನ್ನು ವಿರೋಧಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಸತೀಶ್ ಜಾರಕಿಹೊಳಿ, ಈ ಬಾರಿ ತಾವು ಗೆಲ್ಲುವ ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಬಲಿಷ್ಠ ನಾಯಕರಾಗಿ ಹೊರ ಹೊಮ್ಮಿದ್ದಾರೆ.