ಚಾಮರಾಜನಗರ: ನನ್ನ ಜತೆಯಲ್ಲೇ ಇದ್ದವರು ನನ್ನ ಕತ್ತು ಕೊಯ್ದರು. ನನ್ನ ಸೋಲಿಗೆ ಕಾಂಗ್ರೆಸ್ ಅಭ್ಯರ್ಥಿ ಪುಟ್ಟರಂಗಶೆಟ್ಟಿ ಕಾರಣರಲ್ಲ. ನಮ್ಮ ಪಕ್ಷದೊಳಗೆ ಇದ್ದವರೇ ಕಾರಣ ಎಂದು ಮಾಜಿ ಸಚಿವ, ಚಾಮರಾಜ ನಗರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣವಿಡೀ ಹೆಸರು ಪ್ರಸ್ತಾಪ ಮಾಡದೇ ಪಕ್ಷದ ಕೆಲವು ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ನಾನು ಇಲ್ಲಿ ಗೂಟ ಹೊಡೆದುಕೊಂಡಿರೋದಕ್ಕೆ ಬಂದಿರಲಿಲ್ಲ. ಸೋಮಣ್ಣ ಆದ ಮೇಲೆ ಅವರ ಮಗ ಬರ್ತಾನೆ ಎಂದು ಸ್ಕೀಂ ಮಾಡಿದಿರಿ. ಆದರೆ ನಾನು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಆಸೆ ಹೊತ್ತು ಬಂದಿದ್ದೆ. 50 ಸಾವಿರ ಉದ್ಯೋಗಗಳನ್ನು ಸೃಷ್ಟಿ ಮಾಡುವ ಉದ್ದೇಶ ಹೊಂದಿದ್ದೆ. ನನ್ನ ಹೆಜ್ಜೆ ಗುರುತು ಮಾಡಿಸಲು ಬಂದಿದ್ದೆ. ನಿಮ್ಮ ಮನೆ ಹಾಳಾಗ, ನೀವೆಲ್ಲ ಸೇರಿಕೊಂಡು ಮಾಡಬಾರದ್ದು ಮಾಡಿಬಿಟ್ರಿ. ಎಂಟು ಹತ್ತು ಜನ ಮಾಡಿರುವ ಪಾಪದ ಕೆಲಸ ಇದು ಎಂದು ಕಿಡಿ ಕಾರಿದರು.
ನನ್ನೊಬ್ಬನಿಗಾಗಿ ಇಡೀ ಜಿಲ್ಲೆಯನ್ನು ಹಾಳು ಮಾಡಿದ್ದಾರೆ. ನನ್ನ ಕ್ಷೇತ್ರದ ಜನರು ಕಣ್ಣೀರು ಹಾಕಿದ್ದಾರೆ. ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದು ಸೋಲಿಸಿದ್ದೀರಿ. ಯಾರ್ಯಾರು ಅಂತ ನನಗೆ ಗೊತ್ತಿದೆ. ವರುಣಾ ದಲ್ಲಿ ನಾನು ಒಂದು ದಿನವೂ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ನಂತರ ಎಷ್ಟು ದಿನ ಬಂದ್ರು? ಸಿನಿಮಾ ನಟರನ್ನು ಪ್ರಚಾರಕ್ಕೆ ಕರೆದುಕೊಂಡು ಬಂದರು. ಅದು ಸೋಮಣ್ಣನ ಬಲ. ನನ್ನನ್ನು ಸೋಲಿಸಲು ಎಲ್ಲೆಲ್ಲಿ ಮೀಟಿಂಗ್ ಆಯ್ತು ಅಂತ ನನಗೆ ಗೊತ್ತಿದೆ. ಇದೆಲ್ಲ ಕೃಪಾಪೋಷಿತ ನಾಟಕ ಮಂಡಳಿಯ ಕೆಲಸ ಎಂದು ಯಾರ ಹೆಸರೂ ಹೇಳದೇ ಕಿಡಿಕಾರಿದರು.