ಹುಬ್ಬಳ್ಳಿ: ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ 18 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಉಪನಗರ ಠಾಣೆಯಲ್ಲಿ ದಾಖಲಾಗಿದೆ. ಹೈದರಾಬಾದ್ ಮೂಲದ ರಾಮಕೃಷ್ಣ ಗೋಶಕೊಂಡಾ, ಅಕ್ಕಿಆಲೂರಿನ ಮಾಸೂಮ್ ಎನ್.ಎಂಬುವವರು ಮೋಸ ಮಾಡಿದ್ದಾರೆ ಎಂದು ಇಲ್ಲಿನ ಇಸ್ಲಾಂಪುರ ಪ್ರದೇಶದ ಜುಲಾಮ್ ಮೊಹಿದ್ದೀನ್ ಎಂಬುವರು ದೂರು ನೀಡಿದ್ದಾರೆ.
ಟ್ರೇಡಿಂಗ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ 45 ದಿನಗಳಲ್ಲಿ 2 ಪಟ್ಟು ಹಣ ಕೊಡುವುದಾಗಿ ನಂಬಿಸಿ, 10 ಲಕ್ಷ ರೂ. ಬ್ಯಾಂಕ್ ಅಕೌಂಟ್ ಹಾಗೂ 8 ಲಕ್ಷ ನಗದು ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆನ್‌ಲೈನ್ ಸಾಲದ ಹೆಸರಲ್ಲಿ ಬ್ಲ್ಯಾಕ್ ಮೇಲ್: ಮತ್ತೊಂದೆಡೆ ಹುಬ್ಬಳ್ಳಿಯ ಮಂಟೂರ ರಸ್ತೆ ಪ್ರಿಯದರ್ಶಿನಿ ಕಾಲೋನಿಯ ಶಾರುಖ್ ಎಂಬಾತ ಸಾಲ ನಿರಾಕರಿಸಿದರೂ ಕೂಡ ವಂಚಕನೊಬ್ಬ ಆನ್‌ಲೈನ್ ಆಯಪ್ ಮೂಲಕ ಸಾಲ ಕೊಟ್ಟು, ಬಡ್ಡಿ ಸಮೇತ ಮರಳಿಸಬೇಕೆಂದು ಬ್ಲ್ಯಾಕ್ ಮೇಲ್ ಮಾಡಿ ವಿವಿಧ ಯುಪಿಐ ಐಡಿಗಳಿಗೆ 1,40,400ರೂ. ಹಾಕಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಸಂತ್ರಸ್ತ ದೂರು ನೀಡಿದ್ದಾರೆ.
ಶಾರುಖ್ ಕ್ವಿಕ್ ಲೋನ್ ಆಯಪ್ ಮೂಲಕ ಸಾಲ ಪಡೆದು ಮರಳಿಸಿದ್ದರು. ಆದರೆ ಅಪರಿಚಿತ, ಸಾಲ ಬೇಡವೆಂದರೂ ಇವರ ಖಾತೆಗೆ ಹಣ ಹಾಕಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಶಾರುಖ್ ದೂರಿದ್ದಾರೆ. ಸಿಇಎನ್ ಕೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ : ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ಪ್ರಕರಣವೊಂದರಲ್ಲಿ ಲೋಕಾಯುಕ್ತ ಅಧಿಕಾರಿಗಳ ಹೆಸರಲ್ಲಿ ವಂಚಿಸಿದ್ದ ಆಂಧ್ರ ಪ್ರದೇಶ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದರು. ಲೋಕಾಯುಕ್ತ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಮಹಿಳಾ ಅಧಿಕಾರಿಯೊಬ್ಬರಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡಿದ್ದರು. ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ನಗರ ಯೋಜನೆ ವಿಭಾಗದ ಜಂಟಿ ನಿರ್ದೇಶಕಿ ಆಶಾ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಆಂಧ್ರಪ್ರದೇಶದ ಕಡಪ ಮೂಲದ ನಾಗೇಶ್ವರ್ ರೆಡ್ಡಿ, ಶಿವಕುಮಾರ್ ರೆಡ್ಡಿ ಹಾಗೂ ಬುಚ್ಚುಪಲ್ಲಿ ವಿನೀತ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ದೂರುದಾರರಿಗೆ ಕರೆ ಮಾಡಿದ ಆರೋಪಿ ನಾಗೇಶ್ವರ್, ತಾನು ಅಶೋಕ್ ರಾವ್, ಲೋಕಾಯುಕ್ತ ಅಧಿಕಾರಿಯಾಗಿದ್ದು ನಿಮ್ಮ ಮನೆ ಮೇಲೆ ದಾಳಿ ಮಾಡುತ್ತೇವೆ. ಇದನ್ನು ತಡೆಯಬೇಕಾದರೆ ಎರಡು ಲಕ್ಷ ಹಣ ನೀಡಬೇಕು. ಇಲ್ಲದಿದ್ದರೆ ಎಡಿಜಿಪಿಗೆ ವರದಿ ನೀಡುವುದಾಗಿ ಬೆದರಿಕೆವೊಡ್ಡಿದ್ದರು.
ಇದಕ್ಕೆ ಹೆದರಿ ಆಶಾ ಸುರೇಶ್ ಅವರು, ಬ್ಯಾಂಕ್ ಮೂಲಕ 1 ಲಕ್ಷ ಹಣ ನೀಡಿದ್ದರು. ಹಣ ಜಮೆಯಾಗುತ್ತಿದ್ದಂತೆ ಆರೋಪಿ ಫೋನ್ ಸ್ವಿಚ್‌ಆಫ್ ಮಾಡಿಕೊಂಡಿದ್ದರು. ಅನುಮಾನಗೊಂಡು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರಿನ ಮೇರೆಗೆ ಇನ್ಸ್ಪೆಕ್ಟರ್ ಹನುಮಂತ ಕೆ. ಭಜಂತ್ರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದರು.