Breaking News

ಬೆಂಗಳೂರು ನಗರದ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಕುರಿತಂತೆ ಎನ್​ಐಎ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.

Spread the love

ಬೆಂಗಳೂರು : 2020ರ ಆಗಸ್ಟ್ 11ರಂದು ಬೆಂಗಳೂರು ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಎನ್‌ಐಎ ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ರದ್ದು ಪಡಿಸುವಂತೆ ಕೋರಿ ಗಲಭೆಗೆ ಕಾರಣರಾಗಿದ್ದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ.

 

ಸಾರ್ವಜನಿಕ ಆಸ್ತಿ ನಷ್ಟ ಆರೋಪ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯಲ್ಲಿ ನಡೆಯುತ್ತಿರುವ ತನಿಖೆ ಮತ್ತು ಈ ಸಂಬಂಧದ ಆರೋಪ ಪಟ್ಟಿಯನ್ನು ರದ್ದು ಪಡಿಸುವಂತೆ ಕೋರಿ ಮೊಹಮ್ಮದ್ ಖಲೀಲ್ ಅಹ್ಮದ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಎನ್‌ಐಎ ನಡೆಸಿರುವ ವಿಚಾರಣೆ ಕೇವಲ ನೆಪ ಮಾತ್ರ: ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ದಾಖಲಿಸಿರುವ ಹೇಳಿಕೆಗಳಿಗೆ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ದಾಖಲಿಸಿರುವ ಅಂಶಗಳಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿವೆ. ಎನ್‌ಐಎ ನಡೆಸಿರುವ ವಿಚಾರಣೆ ಕೇವಲ ನೆಪ ಮಾತ್ರ ಆಗಿದೆ ಎಂದು ಆರೋಪಿಗಳು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಅರ್ಜಿದಾರರ ಆರೋಪ ನಿಜವಾಗಿಯೇ ಇದ್ದಲ್ಲಿ, ಈ ಬಗ್ಗೆ ವಿಚಾರಣೆ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಈ ಹಂತದಲ್ಲಿ ನ್ಯಾಯಾಲಯ ಸಾಕ್ಷಿಗಳನ್ನು ಪರಿಶೀಲನೆ ನಡೆಸಿ ಗಣನೆಗೆ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಅಲ್ಲದೆ, ತನಿಖೆ ಸರಿಯಾಗಿ ನಡೆದಿಲ್ಲ ಎಂದಾದರೆ ತನಿಖೆ ಅಸಮರ್ಪಕ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಆದರೆ, ಎಲ್ಲ ಅರ್ಜಿದಾರರ ದಾಖಲೆಗಳನ್ನು ಸಲ್ಲಿಸಿ ತಮ್ಮ ವಿರುದ್ಧದ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದ ವಿಚಾರಣೆ ನಡೆಸಿರುವ ಎನ್‌ಐಎ ಪೊಲೀಸರು ಕೆಲವು ಅಂಶಗಳನ್ನು ಮರೆಮಾಚಿ, ವಿಚಾರಣೆಗೆ ಒಳಪಡಿಸಿದ್ದಾರೆ. ಇದರಿಂದಾಗಿ ಅರ್ಜಿದಾರರು ತಮ್ಮನ್ನು ನಿರಪರಾಧಿಗಳು ಎಂದು ತೋರಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ.

ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಗೆ ಅನ್ವಯಿಸುವುದಿಲ್ಲ: ಅಲ್ಲದೆ, ಅರ್ಜಿದಾರರ ವಿರುದ್ಧದ ಆರೋಪವು ಕೇವಲ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳ ಅಡಿಗೆ ಸೇರ್ಪಡೆಗೊಳ್ಳಲಿದೆ. ಆದರೆ, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಥವಾ ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆಗೆ ಅನ್ವಯಿಸುವುದಿಲ್ಲ. ಆದರೂ, ಈ ಎರಡೂ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ವಾದ ಮಂಡಿಸಿದ್ದರು.

ಎನ್‌ಐಎ ಪರ ವಕೀಲರಾದ ಪಿ ಪ್ರಸನ್ನಕುಮಾರ್ ವಾದ ಮಂಡಿಸಿ, ಪ್ರಕರಣ ವಿಶೇಷ ನ್ಯಾಯಾಲಯಕ್ಕೆ ಒಳಪಡುವುದಾಗಿದ್ದರೂ, ಅರ್ಜಿದಾರರು ಹೈಕೋರ್ಟ್​ನಲ್ಲಿ ವಿಚಾರಣೆಗೊಳಪಡಿಸುವುದಕ್ಕೆ ಮುಂದಾಗಿದ್ದಾರೆ. ಆರೋಪ ಪಟ್ಟಿಯ ಪ್ರಕಾರ, ಎಲ್ಲ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧದ ಕಾಯ್ದೆಗೆ ಒಳಪಡಲಿದೆ ಎಂಬುದು ಗೊತ್ತಾಗಲಿದೆ. ಜತೆಗೆ, ಘಟನೆಯಲ್ಲಿ ಕನಿಷ್ಟ ನಾಲ್ಕು ಜನ ಜೀವ ಕಳೆದುಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

ಪ್ರಕರಣದ ಹಿನ್ನೆಲೆ ಏನು ?: ಪುಲಕೇಶಿ ನಗರ ಶಾಸಕರಾಗಿದ್ದ ಅಖಂಡ ಶ್ರೀನಿವಾಸ್​ ಮೂರ್ತಿ ಅವರ ಸಂಬಂಧಿ ನವೀನ್ ಎಂಬುವವರು ಪ್ರವಾದಿ ಮಹಮ್ಮದ್ ಅವರ ಗೌರವಕ್ಕೆ ಹಾನಿಯಾಗುವಂತಹ ಹೇಳಿಕೆಯೊಂದನ್ನು ಫೇಸ್ಬುಕ್​ನಲ್ಲಿ ಪ್ರಕಟಿಸಿದ್ದರು. ಇದರಿಂದ ಸ್ಥಳೀಯರು ಕೆ ಜೆ ಹಳ್ಳಿ ಮತ್ತು ಡಿ ಜೆ ಹಳ್ಳಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದರು. ಅಲ್ಲದೆ, ನವೀನನ್ನು ಬಂಧಿಸುವಂತೆ ಪೊಲೀಸರ ಮೇಲೆ ಒತ್ತಾಯಿಸಿದ್ದರು. ಜತೆಗೆ, ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವೇಳೆ ಸಾರ್ವಜನಿಕರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು. ಸರ್ಕಾರದ ಸ್ವತ್ತುಗಳನ್ನು ನಾಶ ಮಾಡಿದ್ದರು.

ಅಲ್ಲದೆ, ಪೋಸ್ಟ್ ಮಾಡಿದ್ದ ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಂಬಂಧಿ ಎಂಬ ಅಂಶ ತಿಳಿಯುತ್ತಿದ್ದಂತೆ ಅವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ