ಬೆಂಗಳೂರು, ಅ.22- ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ಪೊಲೀಸರು ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಪತ್ತೆಹಚ್ಚಿದ್ದಾರೆ. ಬಾಗಲಕೋಟೆ ಜಿ.ಪಂ. ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಸಹಾಯಕ ಎಂಜಿನಿಯರ್ ಅಶೋಕ್ ತೋಪಲಕಟ್ಟಿ ಅವರ ಮನೆ, ಕಚೇರಿ, ಗ್ಯಾಸ್ ಏಜೆನ್ಸಿ ಮೇಲೆ ಇಂದು ಮುಂಜಾನೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ವಿದ್ಯಾಗಿರಿ 8ನೆ ಕ್ರಾಸ್‍ನಲ್ಲಿರುವ ಮನೆ, ಸಂಬಂಧಿಕರ ಹೆಸರಿನಲ್ಲಿರುವ ಮಹಾಲಕ್ಷ್ಮಿ ಗ್ಯಾಸ್ ಏಜೆನ್ಸಿ ಹಾಗೂ ಜಿಲ್ಲಾಡಳಿತ ಭವನದಲ್ಲಿರುವ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಎಸಿಬಿ ಡಿವೈಎಸ್‍ಪಿ ಗಣಪತಿ ಗೂಡಾಜಿ ನೇತೃತ್ವದಲ್ಲಿ ಧಾರವಾಡದಿಂದ ಆಗಮಿಸಿದ್ದ 20ಕ್ಕೂ ಹೆಚ್ಚು ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಅದೇ ರೀತಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಸಹಾಯಕ ಕಾರ್ಯದರ್ಶಿ ಹರೀಶ್ ಅವರ ಮನೆ ಮತ್ತು ಕಚೇರಿಗಳ ಮೇಲೂ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ನೃಪತುಂಗ ರಸ್ತೆಯಲ್ಲಿರುವ ಕಚೇರಿ, ಹುಬ್ಬಳ್ಳಿಯ ಕೋಟಿಲಿಂಗ ನಗರದಲ್ಲಿರುವ ವಾಸದ ಮನೆ, ಸ್ನೇಹಿತನ ಮನೆ, ಬೆಂಗಳೂರಿನ ಯಲಹಂಕದಲ್ಲಿರುವ ಅಳಿಯನ ಮನೆ ಮೇಲೂ ದಾಳಿ ನಡೆಸಲಾಗಿದೆ.
ಅಕ್ರಮ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಶೋಧ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.