ಬೆಂಗಳೂರು,ಅ.22-ಪಕ್ಷದ ನಿಯುಮ ಉಲ್ಲಂಘಿಸಿ ನಾಯಕರ ವಿರುದ್ದ ಬಹಿರಂಗವಾಗಿಯೇ ಹೇಳಿಕೆ ನೀಡುವ ಮೂಲಕ ಮುಜುಗರ ಉಂಟುಮಾಡುತ್ತಿರುವ ಮಾಜಿ ಸಚಿವ ಹಾಗೂ ವಿಜಪುರದ ವಿಧಾನಸಭಾ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ದ ಬಿಜೆಪಿ ಶಿಸ್ತು ಕ್ರಮ ಜರಗಿಸಲು ಮುಂದಾಗಿದೆ. ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಉಳಿದಿರುವವರು ಇದೇ ಹಾದಿ ತುಳಿಯಬಹುದು ಎಂಬ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಘಟಕ, ಒಂದೆರೆಡು ದಿನದಲ್ಲಿ ಅವರ ಹೇಳಿಕೆ ಕುರಿತು ನೋಟಿಸ್ ಜಾರಿ ಮಾಡಲು ಮುಂದಾಗಿದೆ.
ಶಿಸ್ತು ಸಮಿತಿಯೂ ನೋಟಿಸ್ ನೀಡಲಿದ್ದು, ಬಸವನಗೌಡ ಪಾಟೀಲ್ ಅವರಿಂದ ಸಮಪರ್ಕ ಉತ್ತರ ಬಾರದಿದ್ದರೆ, ಪಕ್ಷದಿಂದ ಉಚ್ಛಾಟನೆ ಸೇರಿದಂತೆ ಶಿಸ್ತು ಕ್ರಮ ಜರುಗಿಸಲು ರಾಜ್ಯಧ್ಯಕ್ಷರಿಗೆ ಶಿಫಾರಸ್ಸು ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯತ್ನಾಳ್ ಹೇಳಿಕೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಪಕ್ಷದಿಂದ ಅಮಾನತು ಇಲ್ಲವೇ ಉಚ್ಛಾಟನೆ ಸೇರಿದಂತೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಹುದು.ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿರುವ ಕಾರಣ, ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ಮಾಧ್ಯಮಗಳಲ್ಲಿ ಯತ್ನಾಳ್ ಈಗಾಗಲೇ ನೀಡಿರುವ ಹೇಳಿಕೆಗಳನ್ನು ದೆಹಲಿ ವರಿಷ್ಠರ ಗಮನಕ್ಕೆ ತರಲಾಗಿದೆ. ಅನುಮತಿ ಸಿಕ್ಕ ತಕ್ಷಣವೇ ಪಕ್ಷ ನೋೀಟಿಸ್ ನೀಡಲಿದೆ. ಒಂದು ವೇಳೆ ಅದಕ್ಕೂ ಸರಿಯಾದ ಉತ್ತರ ನೀಡದಿದ್ದರೆ, ಅವರ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.
ಒಂದು ಮೂಲದ ಪ್ರಕಾರ, ರಾಜ್ಯ ಬಿಜೆಪಿ ನಾಯಕತ್ವ ಕುರಿತು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿ ಪಕ್ಷವನ್ನು ಮುಜುಗರಕ್ಕೀಡಾಗುವಂತೆ ಮಾಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲು ರಾಜ್ಯ ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಈಗಾಗಲೇ ನಿರ್ಧಾರ ಕೈಗೊಂಡಿರುವ ಬಿಜೆಪಿ, ಪಕ್ಷದಿಂದ ಉಚ್ಛಾಟನೆ ಮಾಡುವ ಕುರಿತು ನಾಯಕರೊಂದಿಗೆ ಶೀಘ್ರದಲ್ಲೇ ಮಾತುಕತೆ ನಡೆಸಲಿದೆ.
ಈ ಕುರಿತು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮೊದಲಿಗೆ ಮಾತುಕತೆ ನಡೆಸುತ್ತೇವೆ. ನಂತರ ಯತ್ನಾಳ್ ಅವರನ್ನು ಕರೆಸಿ ಮಾತುಕತೆ ನಡೆಸಲಿದ್ದೇವೆ ಎಂದು ಹೆಸರು ಹೇಳಲು ಇಚ್ಛಸದ ಪ್ರಮುಖರು ಹೇಳಿದ್ದಾರೆ.
ಸಚಿವ ಸ್ಥಾನ ಹಾಗೂ ಕ್ಷೇತ್ರದ ಪ್ರತಿನಿಗಳ ಬಗ್ಗೆ ಉಮೇಶ್ ಕಟ್ಟಿ ಸೇರಿದಂತೆ ಉತ್ತರ ಕರ್ನಾಟಕ ನಾಯಕರಲ್ಲಿ ಭಿನ್ನಮತವನ್ನು ಪರಿಹರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉತ್ತರ ಕರ್ನಾಟಕಕ್ಕೆ ತೆರಳಿದ್ದರು. ಈ ವೇಳೆ ಯತ್ನಾಳ್ ಅವರು ಯಡಿಯೂರಪ್ಪ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಲು ನಿರಾಕರಿಸಿದ್ದರು.
ಯತ್ನಾಳ್ ಅವರು ದುರ್ವತನೆ ವಿರುದ್ಧ ಕೆಂಡಾಮಂಡಲಗೊಂಡಿರುವ ಕಟೀಲ್ ಅವರು ಪಕ್ಷದಿಂದ ಉಚ್ಛಾಟನೆ ಮಾಡಲು ಕೇಂದ್ರ ಶಿಸ್ತುಕ್ರಮ ಸಮಿತಿಗೆ ಶೀಘ್ರದಲ್ಲೇ ಶಿಫಾರಸು ಮಾಡಲಿದ್ದಾರೆಂದು ಹೇಳಲಾಗುತ್ತಿದೆ.
ಮೂರು ದಿನಗಳ ಹಿಂದೆ ಯತ್ನಾಳ್ ಶಿಘ್ರ್ರದಲ್ಲೇ ಯಡಿಯೂರಪ್ಪ ನಾಯಕತ್ವ ಬದಲಾವಣೆಯಾಗಲಿದೆ ಎಂದು ಹೇಳಿದ್ದರು.
ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ಕಂದಾಯ ಸಚಿವ ಆರ್.ಅಶೋಕ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಬಲವಾಗಿ ಹೇಳಿದ್ದರು.
ಸದ್ಯ ಇನ್ನೂ ಮೂರು ವರ್ಷ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಖಾಲಿ ಇಲ್ಲ ಎಂದ ಮೇಲೆ ಟವೆಲ್ ಎಲ್ಲಿ ಹಾಕುತ್ತಾರೆ? ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆ ಗೆದ್ದಿದ್ದೇವೆ. ಅವರ ನೇತೃತ್ವದಲ್ಲೇ ಸರ್ಕಾರ ಮುಂದಿನ ಮೂರು ವರ್ಷ ಮುಂದುವರೆಯಲಿದೆ ಎಂದು ಸಚಿವ ಅಶೋಕ್ ಹೇಳಿದ್ದರು.
ಯತ್ನಾಳ್ ಹೇಳಿಕೆಗಳಿಗೆ ಸಂಬಂಸಿ ಯಾವ ಸಂದರ್ಭದಲ್ಲಿ ಏನೇನು ಶಿಸ್ತು ಕ್ರಮ ಕೈಗೊಳ್ಳಬೇಕೋ ಅದನ್ನು ಪಕ್ಷ ತೆಗೆದುಕೊಳ್ಳುತ್ತದೆ. ನನ್ನ ಜವಾಬ್ದಾರಿಯ ಅರಿವು ನನಗಿದೆ. ಸೂಕ್ತ ಸಂದರ್ಭ ಬಂದರೆ, ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪಕ್ಷ ಚಿಂತನೆ ನಡೆಸಲಿದೆ¿ ಎಂಬ ಸುಳಿವನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಸುಳಿವು ನೀಡಿದ್ದರು.