Breaking News
Home / ರಾಜಕೀಯ / ಎಲೆಕ್ಷನ್ ಫೈಟ್: ಬಿಜೆಪಿ ಅಭ್ಯರ್ಥಿ,ಕಾಂಗ್ರೆಸ್ ಶಾಸಕನ ಪತ್ನಿ ಮೆಲೆ ದಾಳಿಯ ಆರೋಪ-ಪ್ರತ್ಯಾರೋಪ

ಎಲೆಕ್ಷನ್ ಫೈಟ್: ಬಿಜೆಪಿ ಅಭ್ಯರ್ಥಿ,ಕಾಂಗ್ರೆಸ್ ಶಾಸಕನ ಪತ್ನಿ ಮೆಲೆ ದಾಳಿಯ ಆರೋಪ-ಪ್ರತ್ಯಾರೋಪ

Spread the love

ವಿಜಯಪುರ: ವಿಧಾನಸಭೆ ಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಇರುವಂತೆ ಜಿಲ್ಲೆಯ ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಕಾಂಗ್ರೆಸ್ ಅಭ್ಯರ್ಥಿಯ ಸೊಸೆ-ಶಾಸಕರೊಬ್ಬರ ಪತ್ನಿಯ ಮೆಲೆ ದಾಳಿ ನಡೆದಿರುವ ಆರೋಪ ಕೇಳಿ ಬಂದಿವೆ. ಎರಡೂ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ಯಾರೂ ದೂರು ನೀಡಿಲ್ಲ.

ಆದರೆ ಎರಡೂ ಪ್ರಕರಣಗಳಲ್ಲಿ ಬಾಧಿತ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಸದರಿ ಘಟನೆಯ ಕುರಿತು ಮಾಹಿತಿ ನೀಡಲು ಎಂ.ಬಿ.ಪಾಟೀಲ ಮಂಗಳವಾರ ಬೆಳಿಗ್ಗೆ 9-15 ಕ್ಕೆ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿದರು. ಮತ್ತೊಂದೆಡೆ ವಿಜು ಗೌಡ ಇದೇ ಘಟನೆ ಕುರಿತು ಮಾಹಿತಿ ನೀಡಲು ತಮ್ಮ ನಿವಾಸದಲ್ಲಿ ಬೆ.10 ಗಂಟೆಗೆ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದನ್ನು ರದ್ದುಗೊಳಿಸಿದರು. ಇಬ್ಬರೂ ನಾಯಕರು ತಾವು ಕರೆದಿದ್ದ ತುರ್ತು ಪತ್ರಿಕಾಗೋಷ್ಠಿ ರದ್ದುಪಡಿಸಲು ಚುನಾವಣೆ ನೀತಿ ಸಂಹಿತೆ ಕಾರಣ ನೀಡಿದರು.

ಇದಕ್ಕೂ ಮೊದಲು ಬಿಜೆಪಿ ಅಭ್ಯರ್ಥಿ ವಿಜುಗೌಡ ತಮ್ಮ ಮೇಲಿನ ದಾಳಿಯ ಕುರಿತು ನಿಖರವಾಗಿ ದೂರು ನೀಡಿದ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ವಿಜುಗೌಡ ಅವರ ಮೇಲಿನ ದಾಳಿಯ ಪ್ರಕರಣದ ಕುರಿತು ಸಮಗ್ರ ತನಿಖೆಗೆ ನಡೆಸುವಂತೆ ಕಾಂಗ್ರೆಸ್ ಅಭ್ಯರ್ಥಿ-ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಸಮಗ್ರ ತನಿಖೆಗೆ ತಾವೇ ಉನ್ನತ ಅಧಿಕರಿಗಳಿಗೆ ಪತ್ರ ಬರೆದಿದ್ದಾರೆ.

 

ರಾಜ್ಯ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ, ಬಬಲೇಶ್ವರ ಚುನಾವಣಾ ಅಧಿಕಾರಿ, ಪೊಲೀಸ್ ಮಹಾ ನಿರ್ದೇಶಕರು, ಎಸ್ಪಿ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಅರ್ಜಿ ಬರೆದಿರುವುದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನಗರದ ಖಾಸಗಿ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮೇಲೆ ನಡೆದಿದೆ ಎನ್ನಲಾದ ದಾಳಿಯ ಕುರಿತು ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ತಲೆಗೆ ಬ್ಯಾಂಡೇಜ್ ಕಟ್ಟಿದ ಹಾಗೂ ಅಂಗಿಯ ಮೆಲೆ ರಕ್ತ ಸೋರಿದ ಸ್ಥಿತಿಯಲ್ಲಿನ ವಿಡಿಯೋ ಹರಿಬಿಟ್ಟಿದ್ದಾರೆ.

ಇಡೀ ಘಟನೆಗೆ ಕಾಂಗ್ರೆಸ್ ಪಕ್ಷದವರು ಕಾರಣವಾಗಿದ್ದು, ಮಹಾರಾಷ್ಟ್ರ ನೋಂದಣಿ ಇದ್ದ 20-25 ವಾಹನಗಳಲ್ಲಿ ನನ್ನನ್ನು ಬೆನ್ನಟ್ಟಿ ಗೂಂಡಾಗಳಿಂದ ದಾಳಿ ನಡೆಸಲಾಗಿದೆ. ಕ್ಷೇತ್ರದಲ್ಲಿ ಪ್ರಚಾರ ಮುಗಿಸಿ, ನಾನು ಸೋಮವಾರ ರಾತ್ರಿ 12-30 ರ ಸುಮಾರಿಗೆ ವಿಜಯಪುರ ನಗರಕ್ಕೆ ಮರಳುತ್ತಿದ್ದಾಗ ನನ್ನ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಕಾರಿನ ಗ್ಲಾಸ್ ಒಡೆದಿದ್ದು, ಅದರ ಗಾಜುಗಳು ನನ್ನ ತಲೆಗೆ ಸಿಡಿದು ಗಾಯಗಳಾಗಿವೆ ಎಂದು ವಿಜುಗೌಡ ಹೇಳಿಕೊಂಡಿದ್ದಾರೆ.

ಘಟನೆಯ ಸಂದರ್ಭದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಬಬಲೇಶ್ವರ ಚುನಾವಣಾಧಿಕಾರಿ, ಪಿಎಸ್‍ಐ ಅವರಿಗೆ ಮೊಬೈಲ್ ಕರೆ ಮಾಡಿದರೂ ಯಾರೂ ಸ್ಪಂದಿಸಿ ನೆರವಿಗೆ ಬಂದಿಲ್ಲ. ಆದರೆ ಘಟನೆಯಿಂದ ಯಾರೂ ವಿಚಲಿತರಾಗದಂತೆ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ಬಬಲೇಶ್ವರ ಕ್ಷೇತ್ರದಲ್ಲಿ ಮತದಾನದ ಅಂತಿಮ ಹಂತದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ ಸೊಸೆ ಹಾಗೂ ಮೇಲ್ಮನೆ ಶಾಸಕ ಸುನಿಲಗೌಡ ಪಾಟೀಲ ಪತ್ನಿ ರೇಣುಕಾ ಪಾಟೀಲ ಮೇಲೆ ದಾಳಿ ನಡೆಸಿದ್ದು, ಕೈ ಮೂಳೆ ಮುರಿತವಾಗಿದೆ ಎಂದು ಕೈಗೆ ಬ್ಯಾಂಡೇಜ್ ಕಟ್ಟಿಕೊಂಡು ವಿಡಿಯೋ ಹೇಳಿಕೆ ನೀಡಿದ್ದಾರೆ.

ರಾಂಪೂರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ತೊಡಗಿದ್ದಾಗ ಮಹಿಳೆಯರಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ಮೈಮೇಲೆ ಏರಿಸಲು ಮುಂದಾದರು. ಈ ಹಂತದಲ್ಲಿ ನನ್ನ ಕೈಗೆ ಪೆಟ್ಟಾಗಿದ್ದು, ಮೂಳೆ ಮೂರಿತವಾಗಿದೆ. ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದ ಅಭ್ಯರ್ಥಿ ಪರ ಪ್ರಚಾರ ನಡೆಸುವ ಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ ಎಂ.ಬಿ.ಪಾಟೀಲ ಕೂಡ ತಮ್ಮದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಿಜೆಪಿ ಅಭ್ಯರ್ಥಿಯ ಮಕ್ಕಳು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಬೆಳಕಿಗೆ ಬರುತ್ತಲೇ ಇದೀಗ ಸ್ವಯಂ ಬಿಜೆಪಿ ಅಭ್ಯರ್ಥಿ ಹೊಸ ನಾಟಕ ಆರಂಭಿಸಿದ್ದಾರೆ ಎಂದು ಪರೋಕ್ಷವಾಗಿ ವಿಜುಗೌಡ ತಮ್ಮ ಮೇಲೆ ದಾಳಿ ನಡೆದಿದೆ ಎಂದು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

ಇದರೊಂದಿಗೆ ಮತದಾನ ಪೂರ್ವದಲ್ಲೇ ಜಿಲ್ಲೆಯಲ್ಲಿ ರಾಜಕೀಯ ಸಂಘರ್ಷ ಆರಂಭಗೊಂಡಿದ್ದು, ಇನ್ನೇನು ಸಂಭವಿಸಲಿದೆ ಎಂಬುದನ್ನು ಕಾದುನೋಡಬೇಕಿದೆ


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ