ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಾದಾಯಿ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.
ಜಿಲ್ಲೆಯ ಇಂಡಿ ವಿಧಾನಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಮೂರುವರೆ ವರ್ಷದಿಂದ ಬಿಜೆಪಿ ಸರ್ಕಾರ ಶ್ರೀಮಂತರ ಪರ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಸಿಲಿಂಡರ್ ಸೇರಿದಂತೆ ದಿನ ಬಳಕೆ ವಸ್ತುಗಳು ಗಗನಕ್ಕೆ ಏರಿವೆ, ಇದರ ಜೊತೆಗೆ 40 ಪರ್ಸ್‌ಂಟ್ ಸರ್ಕಾರ ಎಂದು ಜಗಜಾಹಿರಾಗಿದೆ. ಇವರಿಗೆ ದುಡ್ಡು ಕೊಡಲಾಗದೇ ಗುತ್ತಿಗೆದಾರರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಮುಚ್ಚಿ ಹಾಕಲಾಯಿತು. ಎಂಎಲ್‌ಎಗಳನ್ನು ಖರೀದಿ ಮಾಡಿ, ಅನಧಿಕೃತ ಸರ್ಕಾರ ರಚನೆ ಮಾಡಿ, ಆರಂಭದಲ್ಲಿ ಲೂಟಿಗೆ ಇಳಿದಿದ್ದಾರೆ. ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡುವುದು ಬಿಟ್ಟು ಹಣ ಲೂಟಿ ಹೊಡೆಯುವದರಲ್ಲಿ ಕಾಲ ಕಳೆದಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ವಶ್ರೇಷ್ಠ, ವಿಕಾಸ ಪುರುಷ ಎಂದು ಪ್ರಧಾನಿ ಮೋದಿಯನ್ನು ಕರಿತಾರೆ. ಆದ್ರೆ ಈ ಮೋದಿ ಕರ್ನಾಟಕದಲ್ಲಿ ಬಂದು ಹೇಳ್ತಾರೆ, ನನ್ನ ಕನಸಿದೆ ಕರ್ನಾಟಕ ವಿಕಾಸ ಮಾಡೋದು ಎಂತಾರೆ. ಆದರೆ ನಿಮ್ಮ ಕನಸು ಏಕೆ ನನಸು ಮಾಡೋಕೆ ಆಗಿಲ್ಲಾ? ಯಾಕಂದ್ರೆ ನಿಮ್ಮ ಬಿಜೆಪಿ ಸರ್ಕಾರ 40 ಪರ್ಸೆಂಟ್ ಲೂಟಿ ಮಾಡ್ತಿದೆ. ನೀವು ಕಣ್ಣುಮುಚ್ಚಿ ಕನಸು ಕಾಣುತ್ತಿದ್ದೀರಿ, ಹಾಗಾಗಿ ನೀವು ಭ್ರಷ್ಟಾಚಾರ ಮಾಡುವ ಸರ್ಕಾರವನ್ನು ತಡೆಯಲಿಲ್ಲ ಎಂದು ಟೀಕಿಸಿದರು.