ಕಲಬುರ್ಗಿ: ವಿಧಾನಸಭಾ ಚುನಾವಣೆಗೆ ಕೇವಲ 9 ದಿನಗಳು ಮಾತ್ರ ಬಾಕಿಯಿದ್ದು, ರಾಜಕೀಯ ಪಕ್ಷಗಳ ಮುಖಂಡರು ಪರಸ್ಪರ ವಾಗ್ದಾಳಿ ನಡೆಸುವ ಬರದಲ್ಲಿ ಮಾತಿನ ಎಲ್ಲೆ ಮೀರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರುವ ಬರದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಿವಾದ ಸೃಷ್ಟಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಪ್ರಿಯಾಂಕ ಖರ್ಗೆ, ಪ್ರಧಾನಿ ಮೋದಿ ಚುನಾವಣಾ ಪ್ರಚಾರ, ಬಂಜಾರಾ ಸಮುದಾಯದ ಮೀಸಲಾತಿ ವಿಚಾರದ ಬಗ್ಗೆ ಭಾಷಣ ಕುರಿತು ಪ್ರಸ್ತಾಪಿಸುತ್ತಾ ಪ್ರಧಾನಿ ಮೋದಿಯವರನ್ನು ನಾಲಾಯಕ್ ಎಂದು ಕರೆದಿದ್ದಾರೆ.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮೀಸಲಾತಿ ವಿಚಾರದಲ್ಲಿ ಬಂಜಾರಾ ಸಮುದಾಯದವರು ಆತಂಕಪಡಬೇಡಿ, ನಿಮ್ಮ ಸಮುದಾಯದ ಮಗನೊಬ್ಬ ದೆಹಲಿಯಲ್ಲಿ ಕುಳಿತಿದ್ದಾನೆ ಎಂದು ಹೇಳಿದ್ದಾರೆ. ಇಂತಹ ನಾಲಾಯಕ ಮಗ ಇದ್ದರೆ ಮನೆ ನಡೆಸೋದು ಹೇಗೆ? ಒಬ್ಬ ನಾಲಾಯಕ್ ಮಗನಾದರೆ ಮನೆ ನಡೆಸಲು ಆಗುತ್ತಾ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಣಿಕಂಠ ರಾಠೋಡ್ ಗೆ ಬಿಜೆಪಿ ಟಿಕೆಟ್ ನೀಡಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕ್ ಖರ್ಗೆ ರಾಮರಾಜ್ಯ ಕಟ್ಟಲು ರಾವಣನಿಗೆ ಬಿಜೆಪಿಯವರು ಟಿಕೆಟ್ ನೀಡಿದ್ದಾರೆ ಎಂದು ಗುಡುಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರನ್ನು ವಿಷದ ಹಾವು ಎಂದು ಹೇಳಿದ್ದರು. ಖರ್ಗೆಯವರ ಹೇಳಿಕೆ ಬಿಜೆಪಿ ಕೆಂಗಣ್ನಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಪ್ರಿಯಾಂಕ ಖರ್ಗೆ ಅವರ ಹೇಳಿಕೆ ಪ್ರಧಾನಿ ಮೋದಿಯವರನ್ನು ಕಾಂಗ್ರೆಸ್ ಅವಹೇಳನ ಮಾಡಿದೆ ಎಂದು ಬಿಜೆಪಿ ಕಿಡಿ ಕಾರಿದೆ.
Laxmi News 24×7