ಪಣಜಿ (ಗೋವಾ) : ಎರಡು ವರ್ಷಗಳ ನಂತರ ರಾಜ್ಯದ ಆದಾಯ ಹೆಚ್ಚಾಗುವುದರಿಂದ ಆವಾಗ ರಾಜ್ಯ ಸರ್ಕಾರ ಹೊಸ ಸಾಲ ಪಡೆಯುವ ಅಗತ್ಯ ಬೀಳಲಾರದು ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆಗೆ ಪ್ರತಿಪಕ್ಷಗಳು ಕಿಡಿಕಾರಿವೆ.
ರಾಜ್ಯ ಸರ್ಕಾರದ ಸಾಲದ ಪ್ರಮಾಣ ಸದ್ಯ 24,175.93 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು, ರಾಜ್ಯದ ಪ್ರಮುಖ ಆದಾಯ ಮೂಲವಾಗಿದ್ದ ಗಣಿಗಾರಿಕೆ ಇನ್ನೂ ಆರಂಭವಾಗಿಲ್ಲ ಎಂದಿವೆ.
ಗಣಿಗಾರಿಕೆ ಇನ್ನಷ್ಟೇ ಆರಂಭವಾಗಬೇಕಿದ್ದು, ಅಲ್ಲಿಯವರೆಗೆ ರಾಜ್ಯ ಸರ್ಕಾರವು ಪ್ರವಾಸೋದ್ಯಮದಿಂದ ಬರುವ ಆದಾಯದ ಮೇಲೆ ಗಮನ ಕೇಂದ್ರೀಕರಿಸಬೇಕಿದೆ ಎಂದು ಸಾವಂತ್ ಸಂಪುಟದ ಕೆಲ ಸಚಿವರು ಹೇಳಿದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು 2023-24ನೇ ಸಾಲಿಗೆ 26,844.40 ಕೋಟಿ ರೂ.ಗಳ ಒಟ್ಟು ವೆಚ್ಚದ ಬಜೆಟ್ ಮಂಡಿಸಿದ ಸಂದರ್ಭದಲ್ಲಿ ಗಣಿಗಾರಿಕೆಯೊಂದಿಗೆ ಆದಾಯ ಸಂಗ್ರಹಕ್ಕಾಗಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.
“ಮುಂಬರುವ ವರ್ಷಗಳಲ್ಲಿ ಗೋವಾ ಸಾಕಷ್ಟು ಆದಾಯವನ್ನು ಗಳಿಸುವ ಹಾದಿಯಲ್ಲಿದೆ. ಅದರ ನಂತರ ಮತ್ತಷ್ಟು ಸಾಲ ತೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ಸಾವಂತ್ ಇತ್ತೀಚೆಗೆ ಹೇಳಿದ್ದರು. “ಮುಂದಿನ ವರ್ಷದ ಹಣಕಾಸು ಯೋಜನೆಯನ್ನು ಈಗಾಗಲೇ ತಯಾರಿಸಿರುವುದರಿಂದ ನಬಾರ್ಡ್ನಿಂದ ಯೋಜನೆಗಳಿಗೆ ಸಾಲ ಪಡೆಯಲು ಹಿಂಜರಿಯುವುದಿಲ್ಲ” ಎಂದು ಅವರು ತಿಳಿಸಿದ್ದರು. ‘ಸಾಲ’ ಪಡೆಯವ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷಗಳು, ಬಿಜೆಪಿ ಸರ್ಕಾರ ರಾಜ್ಯದ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿವೆ.
ಗೋವಾ ಫಾರ್ವರ್ಡ್ ಅಧ್ಯಕ್ಷ ಮತ್ತು ಶಾಸಕ ವಿಜಯ್ ಸರ್ದೇಸಾಯಿ ಮಾತನಾಡಿ, ಗೋವಾದ ಸಾಲವು 24,000 ಕೋಟಿ ರೂ.ಗಳಾಗಿದ್ದು, ಒಟ್ಟು ರಾಜ್ಯ ದೇಶೀಯ ಉತ್ಪನ್ನದ ಸುಮಾರು ಶೇ 24 ರಷ್ಟಾಗಿದೆ. ಮುಖ್ಯಮಂತ್ರಿಗಳ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ ಮತ್ತು ಬಹುಶಃ ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಾಲ ಪಡೆಯುವುದನ್ನು ಸಮರ್ಥಿಸಿಕೊಳ್ಳಲು ಅವರು ಹಾಗೆ ಮಾತನಾಡಿದ್ದಾರೆ. ಇಂದಿನವರೆಗೂ, ಈ ಸರ್ಕಾರ ಬರೀ ಬೊಗಳೆ ಮಾತುಗಳನ್ನು ಆಡುವುದು ಬಿಟ್ಟರೆ ಸಾಲದ ಅಗಾಧ ಹೊರೆಯಿಂದ ಗೋವಾ ರಾಜ್ಯವನ್ನು ಮುಕ್ತಗೊಳಿಸಲು ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ಉದ್ಯಮ ಮತ್ತು ಸ್ಥಳೀಯ ವ್ಯವಹಾರಗಳಿಗೆ ಯಾವುದೇ ಒತ್ತು ನೀಡದ ಸಿಎಂ, ನಿರುದ್ಯೋಗ ದರ ಹೆಚ್ಚುತ್ತಿರುವ ಮಧ್ಯೆ ರಾಜ್ಯದ ಪರಿಸ್ಥಿತಿ ಮುಂದಿನ 2 ವರ್ಷಗಳಲ್ಲಿ ಕೈಮೀರಿ ಹೋಗುವ ಸಾಧ್ಯತೆಗಳಿವೆ. ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಗೋವಾ ಜನರಿಗೆ ಸುಳ್ಳು ಭರವಸೆ ನೀಡುತ್ತಿರುವ ಸಿಎಂ ರಾಜ್ಯಕ್ಕೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಸರ್ದೇಸಾಯಿ ತಿಳಿಸಿದರು. ಸಾವಂತ್ ಅವರು ಕಳೆದ ಮೂರು ವರ್ಷಗಳಿಂದ ಪದೇ ಪದೆ ಗಣಿಗಾರಿಕೆ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಭರವಸೆ ನೀಡುತ್ತಿದ್ದಾರೆ. ಆದರೆ ಇತ್ತೀಚಿನ ಹೈಕೋರ್ಟ್ ತೀರ್ಪುಗಳ ಪ್ರಕಾರ ಮುಂದಿನ ಎರಡು ವರ್ಷಗಳವರೆಗೆ ಗಣಿಗಾರಿಕೆ ಪ್ರಾರಂಭವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇಂಥ ಸಮಯದಲ್ಲಿ ಮುಖ್ಯಮಂತ್ರಿಗಳು ಗಣಿಗಾರಿಕೆ ಆರಂಭವಾಗುವ ಕಾಲ್ಪನಿಕ ಸಂಭ್ರಮವನ್ನು ಸೃಷ್ಟಿಸಲು ಅದ್ದೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಯಸುತ್ತಿದ್ದಾರೆ ಎಂದು ವಿಜಯ್ ಸರ್ದೇಸಾಯಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಚಾಲಕ ಸಾಮಿಲ್ ವೋಲ್ವೊಯ್ಕರ್ ಮಾತನಾಡಿ, ಮುಖ್ಯಮಂತ್ರಿಗಳು ಮೊದಲು ಸಾಲ ಮರುಪಾವತಿಗೆ ಒತ್ತು ನೀಡಬೇಕು. ‘ಪ್ರತಿಯೊಂದು ವಿಚಾರದಲ್ಲೂ ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದ್ದಾರೆ. ಗಣಿಗಾರಿಕೆ ಪ್ರಕ್ರಿಯೆ ಕೋರ್ಟ್‌ನಿಂದ ರೂಪಿತವಾಗಿದೆ. ಅದು ಶೀಘ್ರದಲ್ಲೇ ಪುನರಾರಂಭವಾಗುವ ಬಗ್ಗೆ ಸಂಶಯಗಳಿವೆ. ಗಣಿಗಾರಿಕೆ ಚಟುವಟಿಕೆಗಳನ್ನು ಪುನರಾರಂಭಿಸಿದರೂ ಅದು ಎಷ್ಟರ ಮಟ್ಟಿಗೆ ನಡೆಯುತ್ತದೆ ಎಂಬುದು ನಮಗೆ ತಿಳಿದಿಲ್ಲ. ಏನೇ ಆದರೂ ಈಗ ಇರುವ ಸಾಲವನ್ನು ಅವರು ಮೊದಲಿಗೆ ತೀರಿಸಲಿ ಎಂದರು.
Laxmi News 24×7