ಅಬುಧಾಬಿ: ಇಂದು ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್‍ಗಳ ಭಾರೀ ಅಂತರದಿಂದ ಗೆದ್ದು, ರನ್ ರೇಟಿನಲ್ಲಿ ಚೇತರಿಕೆ ಕಂಡಿದೆ.
ಇಂದು ಅಬುಧಾಬಿ ಮೈದಾನದಲ್ಲಿ ನಡೆದ ಐಪಿಎಲ್-2020ಯ 39ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಬೆಂಗಳೂರು ಬೌಲರ್ ಗಳ ಮಾರಕ ದಾಳಿಗೆ ತತ್ತರಸಿ ನಿಗದಿತ 20 ಓವರಿನಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 84 ರನ್ ಪೇರಿಸಿತು. ಈ ಸುಲಭ ಗುರುಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಇನ್ನೂ 6.3 ಓವರ್ ಬಾಕಿ ಇರುವಂತೆ 8 ವಿಕೆಟ್‍ಗಳ ಅಂತರದಲ್ಲಿ ಗೆದ್ದು, ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದಿದೆ.
ರನ್ ರೇಟ್ ಜಿಗಿತ
ಪಂದ್ಯಗಳನ್ನು ಗೆಲ್ಲುತ್ತಾ ಬಂದಿದ್ದರು ಬೆಂಗಳೂರು ತಂಡ ಭಾರೀ ಅಂತರದ ಸೋಲು ಮತ್ತು ಆಲೌಟ್ ಆಗಿ ರನ್‍ರೇಟಿನಲ್ಲಿ ಕೊಂಚ ಕೆಳಗೆ ಇತ್ತು. ಈ ಪಂದ್ಯಕ್ಕೂ ಮುನ್ನ 9 ಪಂದ್ಯಗಳಲ್ಲಿ ಆರರಲ್ಲಿ ಗೆದ್ದು, ಮೂರರಲ್ಲಿ ಸೋತಿದ್ದ ಕೊಹ್ಲಿ ಪಡೆ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು. ರನ್ ರೇಟ್ -0.096 ಇತ್ತು. ಆದರೆ ಇಂದು ಭಾರೀ ಅಂತರದಲ್ಲಿ ಗೆದ್ದ ಕಾರಣ 14 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಹೋಗುವ ಮೂಲಕ, +0.182 ರನ್‍ರೇಟ್ ಪಡೆದುಕೊಂಡಿದೆ.
ಕೋಲ್ಕತ್ತಾ ಕೊಟ್ಟ 85 ರನ್‍ಗಳ ಕಡಿಮೆ ಗುರಿಯನ್ನು ಬ್ನೆನ್ನಟ್ಟಿದ ಬೆಂಗಳೂರು ತಂಡಕ್ಕೆ ಆರಂಭಿಕರಾದ ದೇವದತ್ ಪಡಿಕ್ಕಲ್ ಮತ್ತು ಆರೋನ್ ಫಿಂಚ್ ಉತ್ತಮ ಆರಂಭ ನೀಡಿದರು. ಪವರ್ ಪ್ಲೇ ಹಂತದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ ಆರು ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಳ್ಳದೇ 44 ರನ್ ಸೇರಿಸಿತು. ನಂತರ 6ನೇ ಓವರ್ ಎರಡನೇ ಬಾಲಿನಲ್ಲಿ 16 ರನ್ ಗಳಿಸಿದ್ದ ಫಿಂಚ್ ಅವರು ಔಟ್ ಆದರು.