ಹಾಸನ: ಬಿಯರ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ರಸ್ತೆ ಬದಿ ಬಿಯರ್ ವ್ಯರ್ಥವಾಗಿ ಹರಿದು ಹೋದ ಘಟನೆ ಹಾಸನ ಜಿಲ್ಲೆಯ, ಹೊಳೆನರಸೀಪುರದಲ್ಲಿ ನಡೆದಿದೆ.
ಹಾಸನದಿಂದ ಕೇರಳಕ್ಕೆ ಲಾರಿಯಲ್ಲಿ ಸುಮಾರು 900 ಬಾಕ್ಸ್ ಬಿಯರ್ ಸಾಗಿಸಲಾಗುತ್ತಿತ್ತು. ಆದರೆ ಹೊಳೆನರಸೀಪುರ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಿಯರ್ ತುಂಬಿದ ಲಾರಿ ರಸ್ತೆ ಬದಿಯಲ್ಲಿ ಒಂದು ಕಡೆ ವಾಲಿಕೊಂಡಿದೆ. ಇದರಿಂದ ಒಂದಷ್ಟು ಬಿಯರ್ ಬಾಟಲಿ ಲಾರಿಯೊಳಗೇ ಒಡೆದು ಹೋದರೆ, ಮತ್ತಷ್ಟು ಬಿಯರ್ ಬಾಟಲಿಗಳು ರಸ್ತೆ ಮೇಲೆ ಬಿದ್ದು ಚೂರಾಗಿವೆ.
ಅಂದಾಜು ಸುಮಾರು ನೂರು ಬಾಕ್ಸ್ ನಷ್ಟು ಬಿಯರ್ ನಾಶವಾಗಿದೆ. ಇದರಿಂದಾಗಿ ಬಿಯರ್ ರಸ್ತೆ ಬದಿ ನೀರಿನಂತೆ ಹರಿದು ಹೋಗಿದೆ. ವ್ಯರ್ಥವಾಗಿ ಹರಿದುಹೋಗುತ್ತಿದ್ದ ಬಿಯರ್ ಅನ್ನು ಸಾರ್ವಜನಿಕರು ಕುತೂಹಲದಿಂದ ನಿಂತು ನೋಡುತ್ತಿದ್ದರೆ, ಮದ್ಯಪ್ರಿಯರು ಅಯ್ಯೋ ಇಷ್ಟೊಂದು ಬಿಯರ್ ಕಣ್ಣ ಮುಂದೆಯೇ ವ್ಯರ್ಥ ಆಗುತ್ತಿದೆಯಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.