ಬೆಳಗಾವಿ: ಚುನಾವಣಾ ಪ್ರಚಾರವೆಂದು ರಾಜ್ಯಕ್ಕೆ ಅಮಿತ್ ಷಾ ಬಂದು ಮಾತನಾಡುತ್ತಾ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದಂಗೆಗಳು ಏಳುತ್ತವೆ ಎಂದ ಹೇಳಿದ್ದರು. ಅವರ ಈ ಮಾತುಗಳು ಕರ್ನಾಟಕದ ಜನತೆಗೆ ಮಾಡಿದ ಅಪಮಾನ. ಹಿಂದು-ಮುಸ್ಲಿಂ ಜಗಳ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡುವವರು ಅವರೇ ಎಂದು ಅಮಿತ್ ಷಾ ಹಾಗೂ ಬಿಜೆಪಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಚಿಕ್ಕೋಡಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾ, ಅಮಿತ್ ಷಾ ಆಡಿರುವ ಮಾತಿನ ವಿರುದ್ಧ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಜತೆಗೆ ಕೋರ್ಟ್ಗೆ ಹೋಗುತ್ತೇವೆ. ಒಬ್ಬ ಕೇಂದ್ರ ಗೃಹ ಸಚಿವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ದಂಗೆಗಳು ಏಳುತ್ತವೆ ಎಂದು ಹೇಳುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಬಿಜೆಪಿಯವರು ಹೇಳಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಕರ್ನಾಟಕದ ಒಂದು ಎಂಜಿನ್ ಕೆಟ್ಟು ಹೋಗಿದೆ. ಈ ಬಾರಿಯ ಚುನಾವಣೆಯಲ್ಲಿ ನಾವು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಉಳಿಸಬೇಕಿದೆ. ಪ್ರಜಾಪ್ರಭುತ್ವದಲ್ಲಿ ಯಾರು ಸತ್ಯ ಬರೆಯುವಂತೆ ಇಲ್ಲ, ಸತ್ಯ ಹೇಳುವಂತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಂವಿಧಾನ ಉಳಿಬೇಕು ಅಂದ್ರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಅಧಿಕಾರದಲ್ಲಿರುವ ಡಬಲ್ ಎಂಜಿನ್ ಸರ್ಕಾರ ಏನೂ ಕೆಲಸ ಮಾಡುವುದಿಲ್ಲ ಎಂದು ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ 40% ಲಂಚ ಪಡೆಯುತ್ತಿರುವ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು. ನಮ್ಮ ರಾಜ್ಯದಲ್ಲಿ 25 ಲಕ್ಷ ಯುವಕರಿಗೆ ನೌಕರಿ ಇಲ್ಲ. ಹೀಗಿದ್ದರೂ ಯಾಕೇ ಸರಕಾರಿ ನೌಕರಿಗೆ ನೇಮಕಾತಿ ಮಾಡುತ್ತಿಲ್ಲ. 2 ಲಕ್ಷಕ್ಕೂ ಅಧಿಕ ಸರ್ಕಾರಿ ಕೆಲಸ ಬಾಕಿ ಉಳಿದಿದೆ. ಎರಡು ವರ್ಷದಲ್ಲಿ ನಿರೀಕ್ಷೆ ಮಾಡದಷ್ಟು ಬೆಲೆ ಏರಿಕೆ ಆಗಿದ್ದು, ಮೋದಿ ಎಲ್ಲದರ ಮೇಲೂ ಜಿಎಸಟಿ ಹಾಕಿದ್ದಾರೆ. ಗಾಳಿ ಒಂದನ್ನ ಮಾತ್ರ ಫ್ರೀ ಬಿಟ್ಟಿದ್ದಾರೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.