ಬೆಳಗಾವಿ: ಕಳೆದ ಬಾರಿ ನಮ್ಮಲ್ಲಿನ ವ್ಯತ್ಯಾಸದಿಂದ ನಾವು ಖಾನಾಪುರ ಕ್ಷೇತ್ರ ಕಳೆದುಕೊಂಡಿದ್ದೆವು. ಇದರಿಂದ ಕ್ಷೇತ್ರ ಸಂಪೂರ್ಣ ಹಿಂದುಳಿದಿದೆ. ಈಗ ತಪ್ಪನ್ನು ತಿದ್ದುಕೊಂಡಿದ್ದೇವೆ. ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ಇಂದು ಖಾನಾಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ ಪರವಾಗಿ ರೋಡ್ ಶೋ ನಡೆಸಿ ಮಾತನಾಡಿದರು.
ಖಾನಾಪುರ ದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಬಾರಿ 100% ಬಿಜೆಪಿ ವಿಜಯಿ ಆಗ್ತಾರೆ. ನಾನು ವಿಜಯ ಸಂಕಲ್ಪ ಯಾತ್ರೆಗೆ ಬಂದಾಗ ನೀವೆಲ್ಲರೂ ಒಂದು ಸಂಕಲ್ಪ ಮಾಡಿ, ಖಾನಾಪುರ ಅಭಿವೃದ್ಧಿಗೆ ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಬಗ್ಗೆ ಹೇಳಿದ್ದಿರಿ. ನಿಮ್ಮ ಬೆಂಬಲದಿಂದ ವಿಠಲ ಹಲಗೇಕರ್ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ರಾಜ್ಯಾದ್ಯಂತ ಬಿಜೆಪಿ ಸುನಾಮಿ ಇದೆ*
ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಇಡೀ ರಾಜ್ಯದಲ್ಲಿ ಬಿಜೆಪಿ ಸುನಾಮಿ ಇದೆ. ರಾಜ್ಯದಲ್ಲಿ ನೂರಕ್ಕೆ ನೂರು ಬಿಜೆಪಿ ಸರ್ಕಾರ ಬರುತ್ತದೆ. ಜನಪರ ಜನಕಲ್ಯಾಣ ಸರ್ಕಾರವನ್ನು ನಾವು ಸ್ಥಾಪನೆ ಮಾಡುತ್ತೇವೆ. ಅದಕ್ಕಾಗಿ ಖಾನಾಪುರದ ಅಭಿವೃದ್ದಿಗೆ ಬಿಜೆಪಿಯ ಎಂಎಲ್ಎ ಆಗಬೇಕು. ಇದಕ್ಕಾಗಿ ವಿಠಲ್ ಅವರಿಗೆ ನಿಮ್ಮ ಸಂಪೂರ್ಣ ಬೆಂಬಲ ಕೊಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ವಿಠಲ್ ಅವರು ರೈತ ಸಂಘಟನೆ ಮಾಡಿದವರು*
ವಿಠಲ್ ಅವರು ನಿಮ್ಮ ನಡುವೆ ಇದ್ದು ಬೆಳೆದವರು. ರೈತ ಸಂಘಟನೆ ಮಾಡಿ, ರೈತರ ಪರವಾಗಿ ನಿಂತು ಹೋರಾಟ ಮಾಡಿದವರು. ಸಕ್ಕರೆ ಕಾರ್ಖಾನೆಯನ್ನು ಮಾಡಿ ರೈತರಿಗೆ ಒಳ್ಳೆಯ ದರವನ್ನು ಕೊಟ್ಟು ಹೆಸರುವಾಸಿ ಆದವರು. ಇಂತಹ ಚಿಂತಕರ ಕೈಲಿ ಅಧಿಕಾರ ಬಂದರೆ ರೈತರಿಗಾಗಿ ಬಿಜೆಪಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಬಹುದು. ಬಿಜೆಪಿ ಸರ್ಕಾರ ಕೋವಿಡನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಮೋದಿಯವರು ವ್ಯಾಕ್ಸಿನ್ ಕೊಟ್ಟು ನಮ್ಮ ರಾಜ್ಯವನ್ನು ಕೊವಿಡ್ ಮುಕ್ತ ಮಾಡಿದ್ದಾರೆ. ಅವರಿಗೆ ಕೋಟಿ ಕೋಟಿ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಬಿಜೆಪಿ ಸರ್ಕಾರದಿಂದ ಆರ್ಥಿಕ ಸುಧಾರಣೆ ಆಗಿದೆ*
ಪ್ರವಾಹ ಸಂದರ್ಭವನ್ನು ಅತ್ಯಂತ ದಕ್ಷತೆಯಿಂದ ಎದುರಿಸಿದ್ದೀವಿ. ಬೆಳೆ ಪರಿವಾರ ದುಪ್ಪಟ್ಟು ಕೊಟ್ಟಿದ್ದೀವಿ. ಬಿದ್ದ ಮನೆಗೆ ಐದು ಲಕ್ಷ ರೂ.ಪರಿಹಾರ ಕೊಟ್ಟಿದ್ದೇವೆ. ಬೇರೆ ಯಾವುದೇ ರಾಜ್ಯದಲ್ಲಿ ಇಷ್ಟು ಪರಿಹಾರ ನೀಡಿಲ್ಲ. ಇದು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯ. ಆರ್ಥಿಕ ಸುಧಾರಣೆಗೆ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ 54 ಲಕ್ಷ ರೈತರಿಗೆ ನೇರವಾಗಿ 16 ಸಾವಿರ ಕೋಟಿ ಅನುದಾನ ನೀಡಿದ್ದಾರೆ. ರಾಜ್ಯದಿಂದಲೂ ಈ ಕೆಲಸ ಆಗಿದೆ. ರೈತರಿಗೆ ಜೀವ ವಿಮೆ ಮಾಡಿಸಿದ್ದೇವೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಮಾಡಿದ್ದೇವೆ. ಕಾರ್ಮಿಕರು, ನೇಕಾರರು, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಅಭಿವೃದ್ಧಿ ನಿಗಮಗಳ ಮೂಲಕ ಸಾಮಾಜಿಕ ನ್ಯಾಯ*
ನಾವು ವೀರಶೈವ, ಮರಾಠ ಅಭಿವೃದ್ಧಿ ನಿಯಮಗಳನ್ನು ಮಾಡಿದ್ದೇವೆ. ಮರಾಠ ಅಭಿವೃದ್ಧಿ ನಿಗಮದ ಮೂಲಕ ಗಂಗಾ ಕಲ್ಯಾಣ ಯೋಜನೆ, ಮರಾಠ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ 200 ಕೋಟಿ ರೂ ಪ್ರೋತ್ಸಾಹ ಧನ ನೀಡಿದ್ದೇವೆ. ಮೀನುಗಾರರಿಗೆ, ನೇಕಾರರಿಗೆ, ಹಡಪದ ಸಮಾಜ ಅಭಿವೃದ್ಧಿ ನಿಗಮ ಮಾಡಲಾಗಿದೆ. ಕಾಂಗ್ರೆಸ್ ಅವರು ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುತ್ತಾರೆ. ಆದರೆ ನಿಜವಾದ ನ್ಯಾಯ ಕೊಟ್ಟಿರುವುದು ಬಿಜೆಪಿ ಸರ್ಕಾರ. ನಾವು ಮಾಡಿರುವ ಮೀಸಲಾತಿ ಹೆಚ್ಚಳ ದೇಶದಲ್ಲೇ ಮಾದರಿ ಆಗಿದೆ. ಈ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ನಂಬಬೇಡಿ*
ಕಾಂಗ್ರೆಸ್ ಅವರು ಈಗ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಈಗ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಇದನ್ನು ನಾವು ಆಗಲೇ ಮಾಡಿದ್ದೆವು. ಆದರೆ ಸಿದ್ದರಾಮಯ್ಯ ಅದನ್ನು5 ಕೆಜಿಗೆ ಇಳಿಸಿದರು. ಈಗ ಮತ್ತೆ 10 ಕೆಜಿ ಅಂತಿದಾರೆ. ರಾಹುಲ್ ಗಾಂಧಿ ರಾಜಸ್ತಾನ, ಘತ್ತೀಸ್ ಘಡ ಚುನಾವಣೆಯಲ್ಲಿ ಹತ್ತು ದಿನಗಳಲ್ಲಿ ಎಲ್ಲ ಭರವಸೆ ಈಡೇರಿಸುತ್ತೇವೆ ಅಂತ ಹೇಳಿದ್ದರು. ಆದರೆ, ಇದುವರೆಗೂ ಯಾವುದೇ ಬೇಡಿಕೆ ಈಡೇರಿಸಿಲ್ಲ. ಅವರು ಜನರಿಗೆ ಮೋಸ ಮಾಡ್ತಿದ್ದಾರೆ. ಅದ್ದರಿಂದ ಭ್ರಷ್ಟ ಕಾಂಗ್ರೆಸ್ ನಂಬಬೇಡಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್ ಹಿನ್ನಡೆ ಮಾಡಿದೆ*
ಅಭಿವೃದ್ಧಿಯಲ್ಲಿ ಕಾಂಗ್ರೆಸ್ ಗೆ ಮನಸ್ಸಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ವಿರೋಧ ಮಾಡುತ್ತೆ. ಬೆಳಗಾವಿಗೆ ಅತಿ ಹೆಚ್ಚು ಅನುದಾನ ಕೊಟ್ಟಿರುವುದು ಬಿಜೆಪಿ. ನಾವು ಇಡೀ ಕರ್ನಾಟಕವನ್ನು ಸುಭಿಕ್ಷ ನಾಡನ್ನಾಗಿ ಮಾಡುತ್ತೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಖಾನಾಪುರ ಅಭಿವೃದ್ಧಿಗೆ ಅಗತ್ಯ ಅನುದಾನ ಮಂಜೂರಾತಿ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಅಭಿವೃದ್ಧಿ ಪರ ಬೆಳಗಾವಿ ಜಿಲ್ಲೆಯಲ್ಲಿ ಜಾತಿ-ಹಣದ ರಾಜಕಾರಣ ನಡೆಯುವುದಿಲ್ಲ*
ಬೆಳಗಾವಿ: ಬೆಳಗಾವಿ ಜಿಲ್ಲೆ ಅಭಿವೃದ್ಧಿ ಪರ ಜಿಲ್ಲೆ. ಇಲ್ಲಿ ಜಾತಿ ರಾಜಕಾರಣ, ಹಣದ ರಾಜಕಾರಣ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ ಪರ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೆಳಗಾವಿ ಇದು ಗಂಡು ಮೆಟ್ಟಿದ ನಾಡು. ಚೆನ್ನಮ್ಮ, ರಾಯಣ್ಣನ ನಾಡು. ಕಾಂಗ್ರೆಸ್ ನ ಗ್ಯಾರೆಂಟಿ ಕಾರ್ಡು ಚುನಾವಣೆ ಮುಗಿಯುವವರೆಗೂ ಮಾತ್ರ ಆಮೇಲೆ ಗಳಗಂಟಿ ಆಗುತ್ತದೆ. ಎಂದರು.
ರಮೇಶ್ ಜಾರಕಿಹೊಳಿ ಯಾವುದೇ ಅಧಿಕಾರದ ಆಸೆ ಇಟ್ಟುಕೊಂಡು ರಾಜಕಾರಣ ಮಾಡಿಲ್ಲ. ಅವರು ಗುರಿ ಇಟ್ಟರೆ ಗೆಲುವು ಖಚಿತ. ರಮೇಶ ಜಾರಕಿಹೊಳಿ ಜನರ ಪ್ರಿತಿ ವಿಶ್ವಾಸ ಗಳಿಸಿ ನಾಯಕರಾಗಿದ್ದಾರೆ. ಅವರು ಅಧಿಕಾರದ ನಾಯಕರಾಗಿಲ್ಲ.
ಅವರು ನಾಗೇಶ್ ಮನೊಳ್ಕರ್ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಗೋಕಾಕ್ ಕ್ಷೇತ್ರ ಬಿಟ್ಟು ಇಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.
ನಮ್ಮ ಸರ್ಕಾರ ಐದು ವರ್ಷದಲ್ಲಿ ಕೇವಲ ಮೂರು ವರ್ಷ ಅಧಿಕಾರ ನಡೆಸಿದೆ. ಒಂದು ವರ್ಷ ಸಮ್ಮಿಶ್ರ ಸರ್ಕಾರ ಒಂದು ವರ್ಷ ಕೋವಿಡ್ ನಲ್ಲಿ ಕಾಲ ಹರಣವಾಯಿತು.
ಪ್ರವಾಹ ಬಂದಾಗ ನಾವು ಎರಡು ಪಟ್ಟು ಪರಿಹಾರ ನೀಡಿದ್ದೇವು. ಒಂದು ತಿಂಗಳಲ್ಲಿ ಎರಡೂವರೆ ಸಾವಿರ ಕೋಟಿ ರೂ. ಪರಿಹಾರ ನೀಡಿದ್ದೇವೆ.
ಕಳೆದ ನಾಲ್ಕು ವರ್ಷದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ 54 ಲಕ್ಷ ರೈತರಿಗೆ 16 ಸಾವಿರ ಕೋಟಿ ರೂ.ಅನುದಾನ ನೀಡಿದ್ದೇವೆ ಎಂದರು.
ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ರೈತರು ಯಾರ ಹೆಸರು ಹೇಳುತ್ತಾರೆ. ಬಿಜೆಪಿ ಹೆಸರು ಹೇಳುತ್ತಾರೆ. ರೈತರ ಪರವಾಗಿ ನಮ್ಮ ಸರ್ಕಾರ. ವಿದ್ಯಾರ್ಥಿಗಳ ಪರವಾಗಿ ನಮ್ಮ ಸರ್ಕಾರ.
ಸಾಮಾಜಿಕ ನ್ಯಾಯ ಅಂತ ಹೇಳಿ ಕಾಂಗ್ರೆಸ್ ನವರು ಮಾತ್ರ ಮುಂದೆ ಹೋದರು. ದೀನ ದಲಿತರನ್ನು ಅಲ್ಲಿಯೇ ಇಟ್ಟಿದ್ದೀರಿ. ಈ ಬಾರಿ ಬಿಜೆಪಿ ಸರ್ಕಾರ ಇದೆ. ಸಿದ್ದರಾಮಯ್ಯ ಒಳಮೀಸಲಾತಿ ವಿಷಯ ಬಂದಾಗ ಮಾತನಾಡದೇ ಓಡಿ ಹೋದರು. ಆದರೆ, ನಾನು ಓಡಿ ಹೋಗುವ ಮುಖ್ಯಮಂತ್ರಿ ಅಲ್ಲ. ನಾನು ಜೇನು ಗೂಡಿಗೆ ಕೈ ಹಾಕಿ ಅವರಿಗೆ ಜೇನು ತುಪ್ಪ ನೀಡಿದ್ದೇನೆ ಎಂದರು.
ಸುರ್ಜೇವಾಲ ಅಂತ ಒಬ್ಬ ವ್ಯಕ್ತಿ ಇದ್ದಾನೆ. ಅವರು ಬೊಮ್ಮಾಯಿ ಲಿಂಗಾಯತರಲ್ಲ ಅಂತ ಹೇಳಿದ್ದಾರೆ. ನಾನು ಒಬ್ಬ ಮುಖ್ಯಮಂತ್ರಿಯಾಗಿ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸುವ ಕೆಲಸ ಮಾಡಿದ್ದೇನೆ ಎಂದರು.