ಬೆಂಗಳೂರು: ಕಾಂಗ್ರೆಸ್ ಸಮುದ್ರವಿದ್ದಂತೆ. ಬಿಜೆಪಿಯ ಅಣೆಕಟ್ಟು ಒಡೆದು ಹೋಗಿದ್ದು, ನದಿಯಾಗಿ ಹರಿಯುತ್ತಿರುವ ನೀರು ಕಾಂಗ್ರೆಸ್ ಎಂಬ ಸಮುದ್ರ ಸೇರಲೇಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ ಅವರ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ಹಾಗೂ ಲಿಂಗಾಯತ ಸಿಎಂ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಆಣೆಕಟ್ಟು ಒಡೆದ ನಂತರ ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ನೀರು ಸಮುದ್ರ ಸೇರಬೇಕು. ಕಾಂಗ್ರೆಸ್ ಸಮುದ್ರ ಇದ್ದಂತೆ ಬಿಜೆಪಿಯಿಂದ ಹೊರ ಬಂದವರು ಕಾಂಗ್ರೆಸ್ ಸಮುದ್ರಕ್ಕೆ ಎಲ್ಲರೂ ಬಂದು ಸೇರಬೇಕು. ಬಿಜೆಪಿ ಹೊಸದಾಗಿ ಅಣೆಕಟ್ಟು ಕಟ್ಟುವ ಕೆಲಸ ಮಾಡಲಿ ಎಂದರು.
ಬಿಜೆಪಿಯ ಲಿಂಗಾಯಿತ ಡ್ಯಾಂ ಒಡೆದಿದೆ. ಡ್ಯಾಂ ಒಡೆದು ದೊಡ್ಡ ದೊಡ್ಡ ಕಲ್ಲುಗಳು ಹೊರ ಬಂದಿವೆ. ಹರಿಯೋ ನೀರು ಸಮುದ್ರ ಸೇರಲೆಬೇಕಲ್ಲ. ಕಾಂಗ್ರೆಸ್ ಎಂಬ ಸಮುದ್ರವನ್ನು ಸೇರುತ್ತಿವೆ. ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ಅನೇಕ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಸಾವಿರಾರು ಜನ ಕಾರ್ಯಕರ್ತರು ಜಿಲ್ಲಾ ಹಾಗೂ ತಾಲೂಕು ಘಟಕಗಳಲ್ಲಿ ಪಕ್ಷ ಸೇರ್ಪಡೆಗೆ ಅನುಮತಿ ನೀಡಿದ್ದೇವೆ ಎಂದರು.
ನಾಮಪತ್ರ ಸಲ್ಲಿಕೆಯಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಮೇ 10ರಂದು ಕೇವಲ ಮತದಾನ ದಿನವಲ್ಲ. ಭ್ರಷ್ಟಾಚಾರ ಬಡಿದೋಡಿಸುವ ದಿನ, ನಾಲ್ಕು ವರ್ಷಗಳಿಂದ ಈ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಬದಲಾವಣೆಗೆ ನಾಂದಿ ಹಾಡುವ ದಿನ, ಸಂವಿಧಾನ ಪ್ರಜಾಪ್ರಭುತ್ವ ಉಳಿಸಲು ದಕ್ಷಿಣ ಭಾರತದಿಂದ ಆರಂಭವಾಗುವ ದಿನ. ಇನ್ನು ಈ ಸಂದರ್ಭದಲ್ಲಿ ಬಿಜೆಪಿಯಲ್ಲಿ ಮುಂದುವರಿದರೆ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ.
ತುಮಕೂರಿನಲ್ಲಿ 20 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿದ್ದ ಮಾಜಿ ಶಾಸಕ ಗಂಗನುಮಯ್ಯ ಹಾಗೂ ಕಮಲಾ ಗಂಗನುಮಯ್ಯ ಅವರು ಇಂದು ಕಾಂಗ್ರೆಸ್ ಪಕ್ಷ ಸೇರಿ, ಪರಮೇಶ್ವರ್ ಅವರಿಗೆಬೆಂಬಲ ನೀಡುತ್ತಿದ್ದಾರೆ. ಇವರ ಜತೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ತಿಮ್ಮಜ್ಜ, ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಮಾರುತಿ ಅವರು, ರಾಮಕೃಷ್ಣ, ತಿಮ್ಮಯ್ಯ, ಶಿವಕುಮಾರ್, ಸಿದ್ದಪ್ಪ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪಕ್ಷ ಸೇರುತ್ತಿದ್ದಾರೆ. ನಿನ್ನೆ ಮಾಜಿ ಮೇಯರ್ ಆಗಿದ್ದ ಶಾಂತಕುಮಾರಿ ಅವರು ಪಕ್ಷ ಸೇರಲು ಮುಂದಾಗಿದ್ದಾರೆ. ಬಿ.ಆರ್ ನಂಜುಂಡಪ್ಪ ಅವರು ಹಿರಿಯ ನಾಯಕರು, ಅವರು ಹಿಂದೆಯೇ ಶಾಸಕರಾಗಬೇಕಿತ್ತು. ಅವರು ತಮ್ಮ ಅಭಿಮಾನಿ ಬಳಗದ ಜತೆ ಕಾಂಗ್ರೆಸ್ ಜತೆ ಸೇರಿದ್ದಾರೆ. ನಾರಾಯಣ ಸ್ವಾಮಿ ಅವರು ಸೇರಿದಂತೆ 9 ಮಾಜಿ ಕಾರ್ಪೊರೇಟರ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಾರೆ.
ಕಾಂಗ್ರೆಸ್ ಸೇರಲು ಅನೇಕರು ಮುಂದಾಗಿದ್ದು, ಎಲ್ಲರಿಗೂ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೆಳಕು ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ಅದನ್ನು ಗೌರವಯುತವಾಗಿ ಸ್ವಾಗತಿಸಿ. ಈ ಪಕ್ಷಕ್ಕೆ ಆಗಮನ ನಿಮಗೆ ಶಕ್ತಿ ತುಂಬುತ್ತದೆ. ರಾಜ್ಯಕ್ಕೆ ಬದಲಾವಣೆ ತರಲಿದೆ. ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುವುದು ಎಂದು ಹೇಳಿದರು