ಬೆಂಗಳೂರು: ‘ನಾನು ಸ್ಪರ್ಧಿಸುತ್ತಿರುವ ಶಿಗ್ಗಾವಿ ಕ್ಷೇತ್ರದಲ್ಲಿ ಯಾರು ಯಾರ ಜತೆಗಾದರೂ ಹೊಂದಾಣಿಕೆ ಮಾಡಿಕೊಳ್ಳಲಿ. ನನಗೆ ಭಯ ಇಲ್ಲ. ನಾನು ನನ್ನ ಸ್ವಂತ ಬಲದಿಂದ ಗೆಲ್ಲುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
‘ವರುಣ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಒಳಮೈತ್ರಿ ಮಾಡಿಕೊಂಡಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಯಾರೂ ಸೇರಿಕೊಂಡರೂ ಸಿದ್ದರಾಮಯ್ಯ ಅವರಿಗೆ ಸ್ವಂತ ಬಲ ಇದ್ದರೆ, ಅವರು ಗೆಲ್ಲುತ್ತಾರೆ. ಇಲ್ಲದಿದ್ದರೆ ಗೆಲ್ಲುವುದಿಲ್ಲ’ ಎಂದರು.
‘ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿರುವ ಸಿದ್ದರಾಮಯ್ಯ ಅವರಿಗೆ ಭಯ ಹುಟ್ಟಿಕೊಂಡಿದೆ’ ಎಂದು ಬೊಮ್ಮಾಯಿ, ‘ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಫಿಕ್ಸ್ ಆಗಿದಾರೆ ಎಂಬ ಭಯವಿದ್ದು, ಅವರಿಬ್ಬರೂ ಸೇರಿಕೊಂಡಿದ್ದಾರೆ ಎಂಬ ಭಯ ಬಂದಿದೆ. ಆದರೆ, ಎಲ್ಲ ಅಭ್ಯರ್ಥಿಗಳು ತಾವೇ ಗೆಲ್ಲಬೇಕೆಂದು ಚುನಾವಣೆಗೆ ನಿಲ್ಲುತ್ತಾರೆ’ ಎಂದರು.
‘ನನ್ನ ಕ್ಷೇತ್ರ ಶಿಗ್ಗಾವಿಯಲ್ಲೂ ಕಾಂಗ್ರೆಸ್- ಜೆಡಿಎಸ್ ಸೇರಿಕೊಂಡಿದ್ದಾರೆ. ಇದರಿಂದ ನನಗೇನೂ ಭಯವಿಲ್ಲ ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿದ್ದು ನನ್ನ ಮೇಲೆ ವ್ಯತ್ಯಾಸ ಆಗುವುದಿಲ್ಲ. ಕಾಂಗ್ರೆಸ್‌ನ ಒಬ್ಬರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇದನ್ನು ನಾನು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಎನ್ನಲಾ? ನಾನು ಈ ಥರ ಆರೋಪ ಎಲ್ಲ ಮಾಡುವುದಿಲ್ಲ’ ಎಂದರು