ಬೆಂಗಳೂರು: ‘ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಗೆಲ್ಲುವಂತೆ ರಾಹುಲ್ ಗಾಂಧಿ ಹೇಳಿದ್ದಾರೆ. ಜಗದೀಶ ಶೆಟ್ಟರ್ ಅವರ ಸೇರ್ಪಡೆಯಿಂದ ಆ ಸಾಧನೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ತಮ್ಮ ಕ್ಷೇತ್ರ ಮಾತ್ರವಲ್ಲ, ರಾಜ್ಯದ ಇತರ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಅವರಿಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ಖರ್ಗೆ, ‘ಜನಸಂಘದ ಹಿನ್ನೆಲೆ ಇದ್ದರೂ ವಿವಾದವಿಲ್ಲದೇ ಶೆಟ್ಟರ್ ಕೆಲಸ ಮಾಡಿದಿದ್ದಾರೆ. ನಾವು ಸರ್ಕಾರದಲ್ಲಿದ್ದಾಗ ಅವರು ವಿರೋಧ ಪಕ್ಷದಲ್ಲಿದ್ದರು. ರಾಜಕೀಯವಾಗಿ ಜಟಾಪಟಿ ಇದ್ದರೂ ವೈಯಕ್ತಿಕವಾಗಿ ಎಂದಿಗೂ ಜಗಳವಾಡಿಲ್ಲ’ ಎಂದರು.
‘ಶೆಟ್ಟರ್ ಜೊತೆಗೆ ಮಾಜಿ ಸಂಸದರೂ, ಶಾಸಕರೂ ಆಗಿದ್ದ ಅಮರ ಸಿಂಹ ಪಾಟೀಲ ಕೂಡಾ ಕಾಂಗ್ರೆಸ್ ಸೇರಿದ್ದಾರೆ. ಈ ಇಬ್ಬರ ಸೇರ್ಪಡೆಯಿಂದ ನಮ್ಮ ಪಕ್ಷಕ್ಕೆ ಹೆಚ್ಚಿನ ಶಕ್ತಿ ಸಿಗುವ ವಿಶ್ವಾಸವಿದೆ’ ಎಂದರು.
‘ಲಿಂಗಾಯತ ಸಮುದಾಯಕ್ಕೆ ಆಗುತ್ತಿರುವ ಅಪಮಾನ ಹಾಗೂ ತಮ್ಮನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಬೇಸತ್ತು, ಸ್ವಾಭಿಮಾನ ರಕ್ಷಣೆಗಾಗಿ ಶೆಟ್ಟರ್ ಸೇರಿದಂತೆ ಪ್ರಮುಖ ಲಿಂಗಾಯತ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
‘ಚಾಮರಾಜನಗರದಿಂದ ಬೆಳಗಾವಿವರೆಗೆ ಅನೇಕ ಬಿಜೆಪಿ ನಾಯಕರು ಹಾಗೂ ಶೆಟ್ಟರ್ ಅಭಿಮಾನಿಗಳು ಕರೆ ಮಾಡಿ ಕಾಂಗ್ರೆಸ್ ಪಕ್ಷ ಸೇರಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಜಿಲ್ಲಾಮಟ್ಟದಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅನುಮತಿ ನೀಡಲಾಗಿದೆ’ ಎಂದೂ ಹೇಳಿದರು.
‘ಯಾವುದೇ ಕಾರಣ ಇಲ್ಲದೇ, ಆರೋಪವಿಲ್ಲದೆ ಶೆಟ್ಟರ್ ಅವರಿಗೆ ಬಿಜೆಪಿಯವರು ಟಿಕೆಟ್ ವಂಚಿಸಿದ್ದಾರೆ. ಇದನ್ನು ಸವಾಲೆಂದು ಸ್ವೀಕರಿಸಿ ಕಾಂಗ್ರೆಸ್ ಸೇರುತ್ತಿದ್ದಾರೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು
Laxmi News 24×7