ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಈ ಬಾರಿ ವಿದ್ಯಾರ್ಥಿಗಳಿಗೆ ಶಾಲೆಗಳು ಆರಂಭವಾಗುವ ವೇಳೆಗೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲು ನಿರ್ಧರಿಸಲಾಗಿದೆ.
ಕಳೆದ ವರ್ಷ ಪಠ್ಯ ಪುಸ್ತಕ ಪರಿಷ್ಕರಣೆ ಹಿನ್ನೆಲೆಯಲ್ಲಿ ಶಾಲೆ ಆರಂಭವಾಗಿ ನಾಲ್ಕೈದು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಿಕ್ಕಿರಲಿಲ್ಲ.
ಇದರಿಂದ ಎಚ್ಚೆತ್ತಿರುವ ಶಾಲಾ ಶಿಕ್ಷಣ ಇಲಾಖೆ ಈ ವರ್ಷ ಶಾಲಾ ಆರಂಭದ ಸಮಯದಲ್ಲೇ ಪಠ್ಯಪುಸ್ತಕ ವಿತರಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಮೇ. 29 ರಿಂದ ಪ್ರಸಕ್ತ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳು ಆರಂಭವಾಗಲಿವೆ. ಹೀಗಾಗಿ ಪಠ್ಯಪುಸ್ತಕ ಮುದ್ರಣ ಮತ್ತು ಹಂಚಿಕೆ ಮಾಡುವ ಕರ್ನಾಟಕ ಪಠ್ಯಪುಸ್ತಕಗಳ ಸಂಘವು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಶೇ. 86 ರಷ್ಟು ಪುಸ್ತಕಗಳು ಸರಬರಾಜಾಗಿದ್ದು, ವಿದ್ಯಾರ್ಥಿಗಳಿಗೆ ಶಾಲಾ ಆರಂಭದ ಸಮಯಕ್ಕೆ ಪಠ್ಯಪುಸ್ತಕಗಳು ಸಿಗಲಿವೆ.
ಪ್ರಸಕ್ತ ಸಾಲಿನಲ್ಲಿ ಮಕ್ಕಳಿಗೆ ಅಂದಾಜು 6.39 ಲಕ್ಷ ಪಠ್ಯಪುಸ್ತಕಗಳ ಅವಶ್ಯಕತೆ ಇದ್ದು, ಈಗಾಗಲೇ 5.91 ಲಕ್ಷ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಲಾಗಿದೆ. ಈ ಪೈಕಿ ಬಿಇಒಗಳ ಹಂತದಲ್ಲಿ 5.53 ಲಕ್ಷ ಪಠ್ಯಪುಸ್ತಕಗಳು ಸರಬರಾಜುಗೊಂಡಿವೆ. ಉಳಿದ ಶೇ.7.52 ರಷ್ಟು ಮುದ್ರಣ ಹಂತದಲ್ಲಿದ್ದು, ಇವು ಕೂಡ ಶೀಘ್ರದಲ್ಲೇ ಬಿಇಒ ಕಚೇರಿಗೆ ತಲುಪಲಿವೆ.