ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಬಿಜೆಪಿಯ ರಾಜ್ಯಸಭಾ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಭಾಷಣ ಮಾಡಬೇಕಿದ್ದ ಸಂದರ್ಭದಲ್ಲಿ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಭಾನುವಾರ ಸಾರ್ವಜನಿಕ ಸಭೆ ನಡೆಯುವ ಸಂದರ್ಭದಲ್ಲಿ 80 ವರ್ಷದ ರೈತ ಮೃತಪಟ್ಟಿದ್ದಾರೆ. ನವೆಂಬರ್ 3ರಂದು ನಡೆಯುವ ಉಪ ಚುನಾವಣೆ ಸಂಬಂಧ ಈ ಪ್ರಚಾರ ಸಭೆ ಆಯೋಜಿಸಲಾಗಿತ್ತು.ಬಿಜೆಪಿಯ ಪಂಧಾನ ಕ್ಷೇತ್ರದ ಶಾಸಕ ರಾಮ್ ಡಾಂಗೊರೆ ಭಾಷಣ ಮಾಡುವ ಸಂದರ್ಭದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ ರೈತ ಜೀವನ್ ಸಿಂಗ್ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಕರೆತರುವಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಡಾಂಗೊರೆ ಅವರು ಬಿಜೆಪಿ ಕಾರ್ಯಕರ್ತರಾಗಿದ್ದು, ಕೊರೊನಾ ವೈರಸ್ ಭೀತಿಯ ನಡುವೆಯೂ ಸಭೆಗೆ ಹಾಜರಾಗಿದ್ದರು. ಅವರು ಮೃತಪಟ್ಟಿರುವುದು ತಿಳಿದರೂ ಬಿಜೆಪಿ ನಾಯಕರು ತಮ್ಮ ಪ್ರಚಾರ ನಿಲ್ಲಿಸದೆ ಇರುವುದು ಟೀಕೆಗೆ ಗುರಿಯಾಗಿದೆ.
ಭಾಷಣ ಮುಂದುವರಿಸಿದರು
ಸಿಂಧಿಯಾ ಅವರು ವೇದಿಕೆ ಪ್ರವೇಶಿಸಿದಾಗ ಮೃತದೇಹವನ್ನು ಕೊಂಡೊಯ್ಯಲಾಗಿತ್ತು. ರೈತನ ಸಾವಿನ ಸಂಗತಿಯನ್ನು ಅವರಿಗೆ ತಿಳಿಸಲಾಯಿತು. ಮೃತ ರೈತರಿಗೆ ಸಂತಾಪ ಸೂಚಿಸಿ ಎಂದು ನಿಮಿಷ ಮೌನ ಆಚರಿಸಿದ ಸಿಂಧಿಯಾ, ತಮ್ಮ ಭಾಷಣ ಆರಂಭಿಸಿದ್ದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಟೀಕೆ
ಬಿಜೆಪಿ ಮುಖಂಡರ ವರ್ತನೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. 80 ವರ್ಷದ ವೃದ್ಧನನ್ನು ಚುನಾವಣಾ ಸಭೆಗೆ ಬರಲು ಅವಕಾಶ ನೀಡಿದ್ದು, ಕೊರೊನಾ ವೈರಸ್ ನಿಯಮಗಳ ಉಲ್ಲಂಘನೆ ಎಂದು ಆರೋಪಿಸಲಾಗಿದೆ. ರೈತ ಕಣ್ಣೆದುರೇ ಮೃತಪಟ್ಟಿದ್ದರೂ ಬಿಜೆಪಿ ನಾಯಕರು ಭಾಷಣ ಮುಂದುವರಿಸಿದ್ದು ನಾಚಿಕೆಗೇಡು. ರೈತನ ಹೆಣ ಬಿದ್ದಿದ್ದರೂ ಬಿಜೆಪಿ ನಾಯಕರು ಚಪ್ಪಾಳೆ ತಟ್ಟುತ್ತಿದ್ದರು ಎಂದು ಕಾಂಗ್ರೆಸ್ ಟೀಕಿಸಿದೆ.
Laxmi News 24×7