ಬೆಂಗಳೂರು: ಅರೆಕಾಲಿಕ ಕೆಲಸ ಕೊಡುವ ಆಮಿಷವೊಡ್ಡಿ ತಮ್ಮ ಆಯಪ್ ಪ್ರಚಾರಕ್ಕೆ ಬಳಸಿಕೊಂಡು ಹಣ ನೀಡದೇ ವಂಚಿಸಿರುವ ಆರೋಪದಡಿ ಇಂಡಿಯನ್ ಮನಿ ಫ್ರೀಡಂ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಿ.ಎಸ್. ಸುಧೀರ್ ಅವರನ್ನು ಬನಶಂಕರಿ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
‘ವಂಚನೆಗೀಡಾಗಿರುವ ಯುವತಿ ಸೇರಿ 21 ಮಂದಿ ದೂರು ನೀಡಿದ್ದಾರೆ. ಅದರನ್ವಯ ಕಂಪನಿಯ ಸಂಸ್ಥಾಪಕರಾದ ಸುಧೀರ್ ಸೇರಿ 23 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಸುಧೀರ್ ಹಾಗೂ ಇತರರು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ವಿಚಾರಣೆಗಾಗಿ ತನಿಖಾಧಿಕಾರಿ ಎದುರು ಹಾಜರಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿದೆ’ ಎಂದು ತಿಳಿಸಿದರು.
‘ಪ್ರಕರಣ ಸಂಬಂಧ ತನಿಖೆ ಆರಂಭಸಲಾಗಿದೆ. ಹೀಗಾಗಿ, ವಿಚಾರಣೆಗೆ ಬರುವಂತೆ ಸುಧೀರ್‌ಗೆ ನೋಟಿಸ್ ನೀಡಲಾಗಿತ್ತು. ಅದರಂತೆ ಸುಧೀರ್ ಠಾಣೆಗೆ ಬಂದಿದ್ದಾರೆ. ವಿಚಾರಣೆ ಆರಂಭಿಸಲಾಗಿದೆ’ ಎಂದು ಹೇಳಿದರು.
ದೂರಿನ ವಿವರ: ‘ಸುಧೀರ್ ಹಾಗೂ ಇತರರು, ಜನರನ್ನು ವಂಚಿಸುವ ಉದ್ದೇಶದಿಂದ ಅಪರಾಧಿಕ ಸಂಚು ರೂಪಿಸಿ ಆಯಪ್ ಅಭಿವೃದ್ಧಿಪಡಿಸಿದ್ದಾರೆ. ಆಯಪ್ ಪ್ರಚಾರಕ್ಕಾಗಿ ಅಮಾಯಕ ಯುವಕ-ಯುವತಿಯರನ್ನು ಬಳಸಿಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಅರೆಕಾಲಿಕ ಕೆಲಸದ ಆಮಿಷವೊಡ್ಡಿದ್ದ ಕಂಪನಿಯವರು, ಆಯಪ್ ಪ್ರಚಾರ ಮಾಡುವಂತೆ ಹೇಳಿದ್ದರು. ಹೆಚ್ಚು ಡೌನ್‌ಲೋಡ್ ಮಾಡಿಸಿದರೆ ಹಾಗೂ ಚಂದಾರಾರನ್ನಾಗಿ ಮಾಡಿಸಿದರೆ, ಪ್ರತಿ ತಿಂಗಳು ₹ 15 ಸಾವಿರ ನೀಡುವುದಾಗಿ ಹೇಳಿದ್ದರು. ಅದರಂತೆ ಯುವಕ-ಯುವತಿಯರು, ಹಣ ಗಳಿಸಬಹುದೆಂದು ತಿಳಿದು ಸಂಬಂಧಿಕರು ಹಾಗೂ ಸ್ನೇಹಿತರನ್ನೇ ಚಂದಾದಾರರನ್ನಾಗಿ ಮಾಡಿಸಿದ್ದರು.’
‘ಯುವಕ-ಯುವತಿಯರಿಂದ ಎಲ್ಲ ಕೆಲಸ ಮಾಡಿಸಿಕೊಂಡ ಕಂಪನಿಯವರು, ನಿಗದಿತ ದಿನದೊಳಗೆ ಸಂಬಳ ಕೊಟ್ಟಿಲ್ಲ. ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆಯೂ ಯಾವುದೇ ಮಾಹಿತಿ ನೀಡಿಲ್ಲ. ಕಾರಣ ನೀಡದೇ ಎಲ್ಲರನ್ನೂ ಕೆಲಸದಿಂದ ತೆಗೆದಿದ್ದಾರೆ’ ಎಂಬ ಸಂಗತಿ ದೂರಿನಲ್ಲಿದೆ.
Laxmi News 24×7