ಬೆಂಗಳೂರು: ರಾಜ್ಯ ಬಿಜೆಪಿ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಿಸಿರುವ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿ ಟಿಕೆಟ್ ಹಂಚಿಕೆ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಯಡಿಯೂರಪ್, ಈಶ್ವರಪ್ಪ, ಜಗದೀಶ್ ಶೆಟ್ಟರ್..
ಬಿಜೆಪಿ ಎಂಬ ಕಳೆಗೆ ನೀರು ಗೊಬ್ಬರ ಹಾಕಿ ಬೆಳೆಸಿದ ನಾಯಕರನ್ನು ಅಗೌರವದ ನಿರ್ಗಮನ ದಾರಿ ತೋರಿಸಿದೆ ಬಿಜೆಪಿ’ ಲೇವಡಿ ಮಾಡಿದೆ.
‘ನಾವೇ ಎಲ್ಲ’ ಎನ್ನುತ್ತಿದ್ದವರಿಗೆ ‘ನೀವೇನೂ ಅಲ್ಲ’ ಎನ್ನುತ್ತಿದೆ ಮೋದಿ -ಅಮಿತ್ ಶಾ ಜೋಡಿ. ಗೊಡ್ಡು ಹಸುಗಳನ್ನು ಗೋಶಾಲೆಗಾದರೂ ಬಿಡಬಹುದಿತ್ತು, ಆದರೆ ನೇರ ಕಸಾಯಿಖಾನೆಗೇ ಕಳಿಸುತ್ತಿರುವುದು ದುರಂತ! ಎಂದು ಕಾಂಗ್ರೆಸ್ ಕಿಚಾಯಿಸಿದೆ.
‘ಸಂತೋಷ್ ಆಟಕ್ಕೆ ಯಡಿಯೂರಪ್ಪ ಬಲಿ. ಪ್ರಹ್ಲಾದ್ ಜೋಶಿ ಆಟಕ್ಕೆ ಜಗದೀಶ್ ಶೆಟ್ಟರ್ ಬಲಿ. ನಾಗಪುರದ ಕರುಳುಬಳ್ಳಿಯ ಸಂಬಂಧವನ್ನೇ ಬಳಸಿ ಬಿಜೆಪಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಪ್ರಹ್ಲಾದ್ ಜೋಶಿ ಲಿಂಗಾಯತ ನಾಯಕರನ್ನು ಹೊಂಡಕ್ಕೆ ಕೆಡವುದರಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಒಬ್ಬರಿಗೆ ಟಿಕೆಟ್ ನಿರಾಕರಿಸುವಂತಹ ಅವಮಾನ ಇನ್ನೊಂದಿಲ್ಲ’ ಎಂದು ಕಾಂಗ್ರೆಸ್ ಕುಟುಕಿದೆ.
‘ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುವ ಉದ್ದೇಶಕ್ಕಾಗಿ ಸ್ವ-ಇಚ್ಚೆಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತಿರುವೆ’ ಎಂದು ಮಂಗಳವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು. ಆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿರುವೆ ಎಂದು ತಿಳಿಸಿದ್ದಾರೆ.
ಇತ್ತ ಮಾಜಿ ಸಿಎಂ ಹಾಗೂ ಹುಬ್ಬಳ್ಳಿ ಕೇಂದ್ರ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಅವರಿಗೆ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವ ಸುದ್ದಿ ಹಿನ್ನೆಲೆಯಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.