ಕನಿಷ್ಠ ನಾಗರಿಕ ಸೌಲಭ್ಯಗಳನ್ನು ಒದಗಿಸದಿರುವುದನ್ನು ವಿರೋಧಿಸಿ ಕಣಬರ್ಗಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ.
ಬೆಳಗಾವಿಯ ಕಣಬರ್ಗಿಯಲ್ಲಿರುವ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ನೈರ್ಮಲ್ಯ, ಬೀದಿದೀಪ, ಸಮರ್ಪಕ ನೀರು ಪೂರೈಕೆ ಹಾಗೂ ಉತ್ತಮ ರಸ್ತೆಗಾಗಿ ಕಳೆದ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಆದರೆ ಮಹಾನಗರಸಭೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕೊನೆಯ ಅಸ್ತ್ರವಾಗಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕರಿಸುವ ನಿಲುವು ತಳೆದಿದ್ದಾರೆ ನಿವಾಸಿಗಳು. ನಿವಾಸಿಗಳ ನಿಯೋಗ ಇಂದು ಪಾಲಿಕೆ ಆಯುಕ್ತ ಡಾ. ರುದ್ರೇಶ್ ಘಾಳಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ನಿವಾಸಿ ನಾಗನಗೌಡ ಬಸವನಗೌಡ ಪಾಟೀಲ, ಸುಮಾರು 25 ವರ್ಷಗಳ ಹಿಂದೆ ಕರ್ನಾಟಕ ಗೃಹ ಮಂಡಳಿಯು ಕಣಬರ್ಗಿ ಕಾಲೋನಿಯಲ್ಲಿ 535 ನಿವೇಶನಗಳನ್ನು ಮಂಜೂರು ಮಾಡಿತ್ತು. ಈ ಪ್ಲಾಟ್ಗಳಲ್ಲಿ ಸುಮಾರು 60% ಮನೆಗಳನ್ನು ನಿರ್ಮಿಸಲಾಗಿದೆ ಮತ್ತು ಜನಸಂಖ್ಯೆಯು ಹೆಚ್ಚಾಗಿದೆ. ಈ ಕಾಲೋನಿಯನ್ನು 3 ವರ್ಷಗಳ ಹಿಂದೆ ಬೆಳಗಾವಿ ಮಹಾನಗರ ಪಾಲಿಕೆಗೆ ವರ್ಗಾಯಿಸಲಾಗಿದೆ. ಆದರೆ ಇಲ್ಲಿ ಕನಿಷ್ಠ ನಾಗರಿಕ ಸೌಲಭ್ಯ ಕಲ್ಪಿಸಲು ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದೆ. ಈ ಬಗ್ಗೆ ಈಗಾಗಲೇ ಮಹಾನಗರಸಭೆ, ಶಾಸಕರು, ಕಾರ್ಪೊರೇಟರ್ಗಳಿಗೆ ಮನವಿ ಸಲ್ಲಿಸಿದ್ದೇವೆ.
ಅವರು ಬಂದು ಪರಿಶೀಲನೆ ನಡೆಸಿ ಮಹಾನಗರಸಭೆಗೆ ಮಾಹಿತಿ ನೀಡಿದ್ದಾರೆ. ಆದರೆ ಇಂದಿಗೂ ಈ ಕಾಲೋನಿಯಲ್ಲಿ 3 ದಿನಕ್ಕೊಮ್ಮೆ ಕಸ ಸಂಗ್ರಹಿಸುವುದನ್ನು ಬಿಟ್ಟರೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಈ ಸ್ಥಳದಲ್ಲಿ ಪ್ರತಿನಿತ್ಯ ಕಸ ಸಂಗ್ರಹಣೆ, ಸ್ವಚ್ಛತೆ, ಬೀದಿ ದೀಪ, ಸಮರ್ಪಕ ನೀರು ಪೂರೈಕೆ ಹಾಗೂ ಗುಂಡಿಗಳನ್ನು ತುಂಬಿ ಉತ್ತಮ ರಸ್ತೆಗಳ ವ್ಯವಸ್ಥೆ ಮಾಡಬೇಕಿದೆ. ಆದರೆ ಈ ಸೌಲಭ್ಯಗಳನ್ನು ಒದಗಿಸದ ಕಾರಣ ನಾವು ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.