Breaking News

ಹಳ್ಳಿಗಳಲ್ಲಿ ಮತ ಬಹಿಷ್ಕಾರ ಟ್ರೆಂಡ್; 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬಾಯ್ಕಾಟ್ ?

Spread the love

ಬೆಂಗಳೂರು: ಮತದಾನ ಪ್ರಮಾಣ ಹೆಚ್ಚು ಮಾಡಬೇಕು. ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಬೇಕೆಂದು ಚುನಾವಣಾ ಆಯೋಗ ಸಾಕಷ್ಟು ಪ್ರಯತ್ನ ನಡೆಸಿದೆ. ಆದರೆ ರಾಜ್ಯದ ಸುಮಾರು 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜನ ಚುನಾವಣೆ ಬಹಿಷ್ಕಾರದ ಬೆದರಿಕೆ ಹಾಕಿದ್ದಾರೆ.

ಇದು ಜಿಲ್ಲಾಡಳಿತಗಳಿಗೆ ದೊಡ್ಡ ತಲೆನೋವಾಗಿದೆ. ಕ್ಷೇತ್ರದ ಶಾಸಕರಿಗಂತೂ ಈ ಬಿಕ್ಕಟ್ಟಿನ ಪರಿಸ್ಥಿತಿ ಗೆಲುವಿಗೆ ದೊಡ್ಡ ಅಡ್ಡಿಯಾಗಿದೆ. ಮುಜುಗರವನ್ನೂ ಉಂಟು ಮಾಡುತ್ತಿದೆ.

ಕಾಲು ಸಂಕ, ತೂಗು ಸೇತುವೆ, ವಿದ್ಯುತ್ ದೀಪ, ಚರಂಡಿ, ಕುಡಿಯುವ ನೀರು, ಶಾಲೆಗೆ ಕಾಲುದಾರಿಯಂತಹ ಸಣ್ಣ ಸಣ್ಣ ಬೇಡಿಕೆಗಳಿಂದ ಹಿಡಿದು ಒಳಮೀಸಲಾತಿವರೆಗಿನ ಬೇಡಿಕೆಗಳನ್ನಿಟ್ಟು ಜನ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಅನೇಕ ಗ್ರಾಮ, ತಾಂಡಾಗಳಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆ ಬ್ಯಾನರ್​ಗಳನ್ನು ಊರ ಮುಂಬಾಗಿಲಿಗೇ ಕಟ್ಟಿದ್ದಾರೆ. ಇದರಿಂದ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಅನೇಕ ಹಳ್ಳಿಗಳಲ್ಲಿ ಸಣ್ಣ ಸಣ್ಣ ಬೇಡಿಕೆ ಈಡೇರಿಸಿಲ್ಲವೆಂದು ನೊಂದ ಗ್ರಾಮಸ್ಥರು ಬ್ಯಾನರ್ ಹಾಕಿದ್ದಾರೆ. ಚುನಾವಣೆಗೂ ಮುನ್ನ ತಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದೇ ಇದ್ದರೆ ತಾವು ಮತದಾನದಿಂದ ದೂರ ಉಳಿಯುವುದಾಗಿ ಮತ ಕೇಳಲು ಬಂದವರಿಗೆ, ರಾಜಕೀಯ ಪಕ್ಷಗಳ ನಾಯಕರಿಗೆ ಹೇಳಿದ್ದಾರೆ.

ಈಗಾಗಲೆ ಅನೇಕ ಕಡೆಗಳಲ್ಲಿ ಅಧಿಕಾರಿಗಳು ತಮ್ಮ ಹಂತದಲ್ಲಿ ಈಡೇರುವ ಭರವಸೆಗಳನ್ನು ಈಡೇರಿಸಿದ್ದಾರೆ. ನೀರಿನ ಸಂಪರ್ಕ, ಬೀದಿ ದೀಪದಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿಯ ಎಲ್ಲ ದೂರುಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಕೆಲವು ಬೇಡಿಕೆಗಳಿಗೆ ಸರ್ಕಾರದ ಅನುಮೋದನೆ ಬೇಕಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೆಲವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗದ ಆಡಳಿತಾತ್ಮಕ ಅಸಹಾಯಕ ಸ್ಥಿತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬಹಿಷ್ಕಾರದ ಬೆದರಿಕೆ ಬಂದಿರುವ ಹಳ್ಳಿಗಳಿಗೆ ಚುನಾವಣಾಧಿಕಾರಿಗಳು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಖುದ್ದು ಭೇಟಿ ಕೊಟ್ಟಿದ್ದಾರೆ. ಬೇಡಿಕೆಗಳನ್ನು ಆಲಿಸಿದ್ದಾರೆ. ಸಾರ್ವಜನಿಕರ ಅಹವಾಲಿಗೆ ದನಿಯಾಗಿದ್ದಾರೆ. ಆದರೆ ಅಧಿಕಾರ ವ್ಯಾಪ್ತಿ ಮೀರಿದ ಕೆಲಸ ಕಾರ್ಯಗಳನ್ನು ಮಾಡಲಾಗದೆ ಕೈಚೆಲ್ಲಿರುವ ಉದಾಹರಣೆಗಳೂ ಇವೆ.

ಚುನಾವಣೆ ಬಹಿಷ್ಕಾರದ ಕೆಲವು ಗ್ರಾಮಗಳಿಗೆ ಚುನಾವಣಾಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಿದರೂ ಪ್ರಯೋಜನವಾಗಿಲ್ಲ. ಬಜೆಟ್​ನಲ್ಲಿ ಅನುಮೋದನೆಯಾಗದ ಹಾಗೂ ಸರ್ಕಾರದ ಅನುಮೋದನೆ ಅವಶ್ಯವಿರುವ ಸಂಪರ್ಕ ರಸ್ತೆ, ಕಟ್ಟಡ, ಸಮುದಾಯ ಭವನ ಮತ್ತಿತರ ಕಾಮಗಾರಿ ಬೇಡಿಕೆ ಈಡೇರಿಸಲಾಗದೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹೀಗೆ ಸಣ್ಣಪುಟ್ಟ ಸಮಸ್ಯೆಗಳಿಂದ ಹಿಡಿದು ಸರ್ಕಾರದ ಹಂತದಲ್ಲಿ ಇಲ್ಲವೇ ಚುನಾಯಿತ ಸರ್ಕಾರ ಅಸ್ಥಿತ್ವದಲ್ಲಿರುವಾಗ ಮಾತ್ರ ಈಡೇರಿಸಬಹುದಾದ ಬೇಡಿಕೆಗಳನ್ನು ಜನರು ಮುಂದಿಟ್ಟು ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆಗಳನ್ನು ರಾಜ್ಯದ ನಾನಾ ಕಡೆಗಳಲ್ಲಿ ನೀಡಿದ್ದಾರೆ. ಇದು ಅಧಿಕಾರಿಗಳಿಗೆ ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ನಾಯಕರಿಗೆ ಬಿಸಿತುಪ್ಪವಾಗಿದೆ.

ಮತದಾನ ಬಹಿಷ್ಕಾರ ತಡೆಗೆ ಯಾವುದೇ ಮಾರ್ಗಸೂಚಿ ಇಲ್ಲ. ಆದರೆ ಅಧಿಕಾರಿಗಳು ತಮ್ಮ ಹಂತದಲ್ಲಿ ಜನರ ಬೇಡಿಕೆ ಈಡೇರಿಸಿ, ಮನವೊಲಿಸಿ ಮತದಾನ ಮಾಡುವಂತೆ ಕ್ರಮ ಕೈಗೊಳ್ಳುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಚುನಾವಣಾಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ಏನೂ ಮಾಡಲು ಆಗುವುದಿಲ್ಲ.

| ವೆಂಕಟೇಶ್ ಕುಮಾರ್, ಅಪರ ಮುಖ್ಯ ಚುನಾವಣಾಧಿಕಾರಿ.

ಮತದಾನ ಬಹಿಷ್ಕರಿಸುವುದಾಗಿ ಹೇಳಿದ ಅನೇಕ ಪ್ರಕರಣಗಳನ್ನು ನಾವು ಮನವೊಲಿಸುವ ಮೂಲಕ ಬಗೆಹರಿಸಿದ್ದೇವೆ. ಮತದಾನದ ಮಹತ್ವ ಮನವರಿಕೆ ಮಾಡಿಕೊಟ್ಟಿದ್ದೇವೆ. ಬಹಿಷ್ಕರಿಸುವುದರಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳನ್ನು ತಿಳಿಸಿಕೊಟ್ಟು ಸಮಸ್ಯೆಯನ್ನು ಪರಿಹರಿಸುತ್ತಿದ್ದೇವೆ. ನಾವು ಅಟೆಂಡ್ ಮಾಡಿದ ಎಲ್ಲ ಪ್ರಯತ್ನಗಳೂ ಫಲ ನೀಡಿವೆ. ಜನ ನಮ್ಮ ಮಾತಿಗೆ ಮನ್ನಣೆ ನೀಡಿದ್ದಾರೆ.

| ಪ್ರಭುಲಿಂಗ ಕವಳಿಕಟ್ಟಿ ಜಿಲ್ಲಾಧಿಕಾರಿ, ಉತ್ತರ ಕನ್ನಡ.

ಊರಿಗೆ ಊರೇ ಚುನಾವಣೆ ಬಹಿಷ್ಕರಿಸುತ್ತಿರುವುದು, ಅಧಿಕಾರಿಗಳ ಮಟ್ಟದಲ್ಲಿ ಈಡೇರಿಸಲಾಗದ ಬೇಡಿಕೆಗಳಿಗೆ ಪಟ್ಟು ಹಿಡಿಯವುದು ಜಿಲ್ಲಾಡಳಿತಗಳಿಗೆ ದೊಡ್ಡ ತಲೆನೋವಾಗಿದೆ. ಸರ್ಕಾರ ಒಳಮೀಸಲಾತಿ ಘೋಷಣೆ ಮಾಡಿರುವುದರಿಂದ ತಾಂಡಾಗಳಲ್ಲಿ ಬಂಜಾರ ಸಮುದಾಯ ಮತದಾನ ಬಹಿಷ್ಕಾರ ಮಾಡಿದೆ. ಈ ಬಗ್ಗೆ ಅನೇಕ ಕಡೆ ಬ್ಯಾನರ್ ಕಟ್ಟಲಾಗಿದೆ. ಇನ್ನೂ ಕೆಲವು ಕಡೆ ನಮ್ಮ ಊರಿಗೆ ವೋಟು ಕೇಳಲು ಬರಬೇಡಿ ಎಂದು ನೇರವಾಗಿ ಎಚ್ಚರಿಸಿರುವುದು ಕಂಡು ಬರುತ್ತಿದೆ.

ಯಾವುದೇ ರಾಜಕಾರಣಿಗಳಿಗೆ ನಮ್ಮ ಮನೆ ಗೇಟಿನೊಳಗೆ ಪ್ರವೇಶವಿಲ್ಲ ಎಂಬ ದೊಡ್ಡದಾದ ಫಲಕವನ್ನು ಮನೆಯೊಂದರ ಗೇಟ್​ನಲ್ಲಿ ಅಳವಡಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ. ಮೋರಿಯ ನೀರು ತಮ್ಮ ಜಮೀನಿಗೆ ಹರಿದು ಬರುತ್ತಿದೆ. ಅದನ್ನು ಸರಿಪಡಿಸಿಕೊಡಿ ಎಂದು ಕೇಳಿದ್ದರು. ಅದಕ್ಕೆ ಸ್ಪಂದನೆ ಸಿಗದೇ ಇರುವ ಕಾರಣ ತಮ್ಮ ಗೇಟ್ ಒಳಗೆ ಪ್ರವೇಶವಿಲ್ಲ ಎಂಬ ಫಲಕ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ!


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ