ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿಬಂಡೀಪುರ ಅಭಯಾರಣ್ಯದಲ್ಲಿ ಸಫಾರಿ ಆರಂಭಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಟೈಗರ್ ಸಫಾರಿಗೂ ಮುನ್ನ ಕನ್ನಡದಲ್ಲೇ ಟ್ವೀಟ್ ಮಾಡಿದ್ದು, ಹೈದರಾಬಾದ್ ಮತ್ತು ಚೆನ್ನೈನ ಕಾರ್ಯಕ್ರಮಗಳ ನಂತರ ಮೈಸೂರಿಗೆ ಬಂದಿರುವೆ.
ಏಪ್ರಿಲ್ 9 ರ ಇಂದು , ಪ್ರಾಜೆಕ್ಟ್ ಟೈಗರ್ ನ 50 ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸುವೆ ಎಂದು ಟ್ವೀಟ್ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ಬಂಡೀಪುರದ ಬೋಳಗುಡ್ಡ ಆಂಟಿ ಪೋಚಿಂಗ್ ಗೆ ಆಗಮಿಸಿದ್ದಾರೆ. ಬಂಡೀಪುರದ ರಕ್ಷಿತಾರಣ್ಯದಲ್ಲಿ ಪ್ರಧಾನಿ ಮೋದಿ ಅವರು 20 ಕಿ.ಮೀ. ಸಫಾರಿ ಮಾಡಲಿದ್ದಾರೆ.
ಬಂಡೀಪುರದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಹುತಾತ್ಮರಾದ ಅರಣ್ಯ ಅಧಿಕಾರಿಗಳು ಸಿಬ್ಬಂದಿಗಳ ಸ್ಮಾರಕಕ್ಕೆ ಪ್ರಧಾನಿ ಮೋದಿ ಅವರು ನಮನ ಸಲ್ಲಿಸಿದ್ದಾರೆ. ಇದೇ ವೇಳೆ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಬಳಿಕ ಬೋಳಗುಡ್ಡ ಆಂಟಿ ಪೋಚಿಂಗ್ ಕ್ಯಾಂಪ್ ನತ್ತ ತೆರಳಿದ ಪ್ರಧಾನಿ ಮೋದಿ 20 ಕಿ.ಮೀ ಸಫಾರಿ ಆರಂಭಿಸಿದ್ದಾರೆ.
ಬಂಡೀಪುರದಲ್ಲಿ ಸುಮಾರು 20 ಕಿ.ಮೀ. ಹುಲಿ ಸಫಾರಿ ನಡೆಸಿ, ಬಳಿಕ ಅರಣ್ಯ ಸಿಬ್ಬಂದಿ ಜೊತೆಗೆ ಸಂವಾದ ನಡೆಸಲಿದ್ದಾರೆ. ನಂತರ 9.30 ಗಂಟೆಗೆ ತಮಿಳುನಾಡಿನ ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡಿನ ಆನೆಕ್ಯಾಂಪ್ ಗೆ ತೆರಳಿ ಅನಾಥ ಆನೆ ಮರಿಗಳ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಆಸ್ಕರ್ ಪ್ರಶಸ್ತಿ ವಿಜೇತ ಎಲಿಫಂಟ್ ವಿಸ್ಟರರ್ಸ್ ಸಿನಿಮಾದ ನಿಜಪಾತ್ರಧಾರಿ ಬೊಮ್ಮ ಹಾಗೂ ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ.