ಕುಟುಂಬದಲ್ಲಿ ಯಾರಾದರೂ ಸಾವಿಗೀಡಾದಾಗ ಜನನ- ಮರಣ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ಆದರೆ ತಾಯಿ ನಿಧನರಾದ ಸಂಬಂಧ ಅವರ ಡೆತ್ ಸರ್ಟಿಫಿಕೇಟ್ ಕೊಡಿ ಎಂದು ಜನನ-ಮರಣ ನೋಂದಣಿ ಕಚೇರಿಗೆ ಮಗಳು ಅರ್ಜಿ ಸಲ್ಲಿಸಿದರೆ ಅಲ್ಲಿ ಕಾರ್ಯನಿರ್ವಹಿಸುವ ಮಹಾನುಭಾವ ಸತ್ತವರದ್ದು ಬಿಟ್ಟು, ಅರ್ಜಿ ಕೊಟ್ಟವರ ಮರಣ ಪ್ರಮಾಣ ಪತ್ರ ನೀಡಿ ಬೇಜವಾಬ್ದಾರಿತನ ಮೆರೆದಿದ್ದಾರೆ.
ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ದೇವರ ನಿಂಬರಗಿ ವೃತ್ತದ ಜನನ-ಮರಣ ನೋಂದಣಿ ವಿಭಾಗದ ವ್ಯಾಪ್ತಿಯಲ್ಲಿ.
ಮೂಲತಃ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದ ನಿವಾಸಿ, ಸದ್ಯ ವಿಜಯಪುರ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಗಂಡನೊಂದಿಗೆ ವಾಸವಾಗಿರುವ ಅರವತ್ತು ವರ್ಷದ ವೃದ್ಧೆ ಸಾವಿತ್ರಿ ತನ್ನ ತಾಯಿ ಸಾಂಯವ್ವ ಮರಣ ಪ್ರಮಾಣ ಪತ್ರ ಪಡೆಯಲು ದೇವರನಿಂಬರಗಿ ವೃತ್ತದ ಜನನ-ಮರಣ ನೋಂದಣಿ ವಿಭಾಗದಲ್ಲಿ ಮನವಿ ಸಲ್ಲಿಸಿದ್ದಾರೆ. ಸಂಬಂಧಿತ ಅಧಿಕಾರಿ 15 ದಿನ ಬಿಟ್ಟು ಮರಣ ಪ್ರಮಾಣ ಪತ್ರ ವಿತರಿಸಿದ್ದು, ಆದರೆ ಮೃತ ಸಾಂಯವ್ವ ಬದಲು ಮನವಿ ಕೊಟ್ಟ ಸಾವಿತ್ರಿಯವರ ಹೆಸರಲ್ಲಿ ಮರಣ ಪ್ರಮಾಣಪತ್ರ ನೀಡಲಾಗಿದೆ.
ಇದನ್ನು ಕಂಡ ಸಾವಿತ್ರಿ ಆಶ್ಚರ್ಯ ಕ್ಕೊಳಗಾಗಿ ತಾವಿನ್ನೂ ಬದುಕಿರುವಾಗಲೇ ತಮ್ಮದೇ ಮರಣ ಪತ್ರ ನೋಡಿ ವೇದನೆ ಅನುಭವಿಸಿದ್ದಾರೆ. ತನ್ನ ತಾಯಿ ಸಾಂಯವ್ವ ಹಾಗೂ ತಂದೆ ನಿಂಗಪ್ಪ ಅವರಿಗೆ ಈ ಸಾವಿತ್ರಿ ಒಬ್ಬಳೇ ಮಗಳಾಗಿದ್ದು, ಊರಲ್ಲಿ ತಂದೆ-ತಾಯಿ ಹೆಸರಿನಲ್ಲಿ 12 ಎಕರೆ ಜಮೀನಿದೆ. ಅವರ ನಿಧನ ಬಳಿಕ ಆ ಆಸ್ತಿಯನ್ನು ಕೊಳ್ಳೆ ಹೊಡೆಯಲು ಸಂಬಂಧಿಕರೇ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹೀಗೆ ಮಾಡಿರಬಹುದೇ ಎಂಬ ಸಂಶಯ ಸಾವಿತ್ರಿ ಅವರನ್ನು ಕಾಡುತ್ತಿದೆಯಂತೆ. ಹೀಗಾಗಿ ಇಳಿ ವಯಸ್ಸಿನಲ್ಲಿ ಏನು ಮಾಡಬೇಕು ಎಂಬುದು ತಿಳಿಯದೆ ನ್ಯಾಯ ಕೊಡಿಸುವಂತೆ ಜಿಲ್ಲಾ ಕಾನೂನು ಸೇವೆಗಳ ಮೊರೆ ಹೋಗಿದ್ದಾರೆ.