ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ( Karnataka Assembly Election 2023 ) ಘೋಷಣೆಯ ನಂತ್ರ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆಯಲ್ಲಿ ದ್ವೇಷ ಭಾಷಣ ಸೇರಿದಂತೆ ವಿವಿಧ ವಿಷಯಗಳಿಗೆ ಸಂಹಿತೆಯ ಕಾನೂನು ಅಡೆತಡೆ ಇದೆ.
ಹೀಗಿದ್ದೂ ಕೋಮು ದ್ವೇಷ ಭಾಷಣ ಮಾಡಿದಂತ ಸಚಿವ ವಿ.ಮುನಿರತ್ನ ( Minister V Munirathna ) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ಬೆಂಗಳೂರು ನಗರ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದು, ಅಖಿಲ ಭಾರತ ಕ್ರೈಸ್ತ ಮಹಾಸಭಾ ಮತ್ತು ಖಾಸಗಿ ದೂರದರ್ಶನ ವಾಹಿನಿ ಭಿತ್ತರಿಸಿರುವ ಅಂಶಗಳ ಆಧಾರ ಹಾಗೂ ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯದವರನ್ನು ಹೊಡೆದು ಓಡಿಸಿ ಎಂದು ಕೋಮು ದ್ವೇಷ ಭಾಷಣ ಮಾಡಿ ಅಲ್ಪಸಂಖ್ಯಾತ ಕ್ರೈಸ್ತರ ಗೌರವ ಹಾಗೂ ಹಕ್ಕುಗಳಿಗೆ ಚ್ಯುತಿ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದರು ಎಂದಿದ್ದಾರೆ.
ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿನ ಹಿನ್ನಲೆ ಬಂದಿತ್ತು. 2023ನೇ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನಲೆಯಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಚುನಾವಣಾಧಿಕಾರಿಗಳು ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಸಚಿವ ವಿ.ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.