ಬೆಂಗಳೂರು: ಕಿಚ್ಚ ಸುದೀಪ್ ರಾಜಕೀಯ ವ್ಯಕ್ತಿಯಲ್ಲ, ಅವರು ಚಿತ್ರರಂಗದಲ್ಲಿರುವ ವ್ಯಕ್ತಿ ಅವರಿಂದು ತಮ್ಮ ನಿಲುವು, ಮನದಾಳದ ಮಾತನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, ಬೊಮ್ಮಾಯಿ ಅವರನ್ನು ಚಿಕ್ಕಂದಿನಿಂದಲೂ ನೊಡಿದ್ದೇನೆ. ಚಿತ್ರರಂಗದ ಕಷ್ಟದ ದಿನಗಳಲ್ಲಿ ಕೆಲವರು ನನ್ನ ಬೆನ್ನಿಗೆ ನಿಂತಿದ್ದರು. ಅವರಲ್ಲಿ ಬೊಮ್ಮಾಯಿ ಕೂಡ ಒಬ್ಬರು. ಸಿಎಂ ಬೊಮ್ಮಾಯಿ ಅವರಿಗೆ ಬೆಂಬಲ ಕೊಡಲು ನಾನು ಸಿದ್ಧ. ಬೊಮ್ಮಾಯಿ ಅವರ ವ್ಯಕ್ತಿತ್ವಕ್ಕೆ ನಾನು ಬೆಲೆ ಕೊಡುತ್ತೇನೆ. ಇಲ್ಲಿ ರಾಜಕೀಯ ಬರಲ್ಲ. ಒಬ್ಬ ವ್ಯಕ್ತಿಯ ವಿಚಾರವಾಗಿ ಮಾತನಾಡುತ್ತಿದ್ದೇನೆ. ನಾನು ಬೊಮ್ಮಾಯಿ ಅಂಕಲ್ ಗೆ ಬೆಂಬಲ ಕೊಡುತ್ತಿದ್ದೇನೆ ಎಂದರು.
ಬೊಮ್ಮಾಯಿ ಅವರು ಈ ಚುನಾವಣೆಯಲ್ಲಿ ನಿನ್ನಿಂದ ಈ ಕೆಲಸವಾಗಬೇಕು ಎಂದರೆ ಮಾಡಲು ನಾನು ಸಿದ್ಧನಿದ್ದೇನೆ. ಹಣಕ್ಕಾಗಿ ನಾನು ಅವರಿಗೆ ಬೆಂಬಲ ನೀಡುತ್ತಿಲ್ಲ. ಹಣಗಳಿಸಲು ನನಗೆ ಸಾಮರ್ಥ್ಯ ಇದೆ, ಬೇರೆ ಅವಕಾಶವಿದೆ ಎಂದು ಅವರು ಹೇಳಿದರು.
ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ. ಅನಿವಾರ್ಯಕಾರಣಗಳಿಗೆ ಚುನಾವಣೆಗೆ ನಿಲ್ಲುವ ವ್ಯಕ್ತಿಯೂ ಅಲ್ಲ. ಹಣಕ್ಕಾಗಿ ನಾನು ಚುನಾವಣ ಪ್ರಚಾರ ಮಾಡುತ್ತಿಲ್ಲ. ಎಲ್ಲರ ಪರ ಚುನಾವಣೆ ಪ್ರಚಾರ ಮಾಡಲು ಆಗಲ್ಲ. ಸಿಎಂ ಬೊಮ್ಮಾಯಿ ಅವರು ಯಾರ ಪರ ಹೇಳುತ್ತಾರೋ ಅವರ ಪರ ಪ್ರಚಾರ ಮಾಡುತ್ತೇನೆ ಎಂದರು.