ಬೆಂಗಳೂರು: ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆ ಮಾಡದೆ ಮೋದಿ ಸರಕಾರ ಕರ್ನಾಟಕಕ್ಕೆ ದ್ರೋಹ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಬೊಮ್ಮಾಯಿ ನೇತೃತ್ವದ ರಾಜ್ಯ ಮತ್ತು ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರಗಳು ಕಳೆದ 6 ತಿಂಗಳಲ್ಲಿ ನೂರಾರು ಕೋಟಿ ರೂ.
ಜಾಹೀರಾತು ಬಿಡುಗಡೆ ಮಾಡಿವೆ.
ಡಬಲ್ ಎಂಜಿನ್ ಸರ್ಕಾರ ಬಂದರೆ ಕರ್ನಾಟಕ ಸ್ವರ್ಗ ಆಗುತ್ತದೆ ಎಂದು ನಂಬಿಸಲು ಭಾಷಣಗಳು ಮತ್ತು ಜಾಹೀರಾತುಗಳ ಆಶ್ರಯ ಪಡೆದಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನದ ಘನತೆಯನ್ನು ಮಣ್ಣುಪಾಲು ಮಾಡಿ ಕರ್ನಾಟಕದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಎರಡೂ ಸರ್ಕಾರಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ಖರ್ಚು ಮಾಡುತ್ತೇವೆಂದು ಹೇಳಿದ್ದ ಮೊತ್ತ 47,557 ಕೋಟಿ ರೂ. ಇದರಲ್ಲಿ ಹಿಂದಿನ ವರ್ಷದ ಬಾಕಿ ಮೊತ್ತ 9,041 ಕೋಟಿ ರೂ. ಈ ಪೈಕಿ ಮಾರ್ಚ್ 31ರ ಅಂತ್ಯಕ್ಕೆ ಖರ್ಚು ಮಾಡಿದ್ದ ಮೊತ್ತ 23,735 ಕೋಟಿ ರೂ ಮಾತ್ರ. ಹಾಗಾಗಿ ಡಬಲ್ ಎಂಜಿನ್ ಸರ್ಕಾರಗಳ ಸಾಧನೆ ಶೇ.49.9ರಷ್ಟು ಮಾತ್ರ ಎಂದು ಟೀಕಿಸಿದ್ದಾರೆ.