ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ.
ಎಬಿಪಿ ಸಿ-ವೋಟರ್ ಸಮೀಕ್ಷೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ
ಕರ್ನಾಟಕ ವಿಧಾನಸಭೆ ಚುನಾವಣೆ (224 ಸ್ಥಾನಗಳು)
ಕಾಂಗ್ರೆಸ್ -115 – 127
ಬಿಜೆಪಿ- 68 – 80
ಜೆಡಿಎಸ್ -23 – 35 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಿ-ವೋಟರ್ ಸಮೀಕ್ಷೆಯಲ್ಲಿ ಅಂದಾಜಿಸಲಾಗಿದೆ.
ಸಿಎಂ ಅಭ್ಯರ್ಥಿಗಳ ಪರವಾಗಿ ಮತದಾರರ ಒಲವು:
ಸಿದ್ದರಾಮಯ್ಯ- ಶೇ 39.1
ಬಸವರಾಜ ಬೊಮ್ಮಾಯಿ – ಶೇ 31.1
ಕುಮಾರಸ್ವಾಮಿ- ಶೇ 21.4
ಡಿ.ಕೆ.ಶಿವಕುಮಾರ್ -ಶೇ 3.2
ಬಿಜೆಪಿ ಸರ್ಕಾರ ಸಾಧನೆ ಕಳಪೆ ಎಂದ 50ರಷ್ಟು ಜನ
ಎಬಿಪಿ ಸಿ -ವೋಟರ್ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ 50ರಷ್ಟು ಜನರು ಬಿಜೆಪಿ ಸರ್ಕಾರ ಕಳಪೆ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ. ಶೇ 47ರಷ್ಟು ಮಂದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳಪೆ ಸಾಧನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉಳಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಶೇ. 47 ರಷ್ಟು ಜನರು ಉತ್ತಮ ಆಡಳಿತ ಎಂದು ರೇಟಿಂಗ್ ನೀಡಿದ್ದಾರೆ.
ನಗರ ಪ್ರದೇಶದ ಮತದಾರರು ಚಿತ್ತ ಕಾಂಗ್ರೆಸ್‌ನತ್ತ
ನಗರ ಪ್ರದೇಶದಲ್ಲಿ ಬಿಜೆಪಿ 11-15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಬಿಜೆಪಿಯನ್ನು ಮೀರಿ ಕಾಂಗ್ರೆಸ್ 15-19 ಸ್ಥಾನಗಳಲ್ಲಿ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಪ್ರದೇಶವಾರು ಹೇಗಿದೆ ಪಕ್ಷಗಳ ಸಾಮರ್ಥ್ಯ?
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಉನ್ನತ ಸ್ಥಾನದಲ್ಲಿದೆ. ಹಳೆಯ ಮೈಸೂರು ಪ್ರದೇಶದ ಬಿಜೆಪಿಗೆ ಶೇ 20 ಮತ್ತು ಕಾಂಗ್ರೆಸ್‌ಗೆ ಶೇ 36 ಮತ ಹಂಚಿಕೆಯಾಗಲಿದೆ. ಈ ಭಾಗದ 55 ಸ್ಥಾನಗಳಲ್ಲಿ ಜೆಡಿಎಸ್‌ಗೆ 26-27 ಸ್ಥಾನಗಳನ್ನು ಮತ್ತು ಕಾಂಗ್ರೆಸ್‌ಗೆ 24-28 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಬಿಜೆಪಿ ಮೂರನೇ ಸ್ಥಾನದಲ್ಲಿ ಇರಲಿದೆ.
ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಜಯ
ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕ್ರಮವಾಗಿ ಶೇ 44 ಮತ್ತು ಶೇ 37ರಷ್ಟು ಮತಗಳನ್ನು ಪಡೆಯಲಿವೆ. ಈ ಪ್ರದೇಶದಲ್ಲಿ ಕಾಂಗ್ರೆಸ್ 19-23 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು ಸೋಲಿಸುವ ಸಾಧ್ಯತೆಯಿದೆ. ಬಿಜೆಪಿ 8-12 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಮುಂಬೈ-ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಗೆಲುವು
ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದ 50 ಸ್ಥಾನಗಳ ಮುಂಬೈ-ಕರ್ನಾಟಕ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಶೇ 43 ಮತಗಳನ್ನು ಗಳಿಸುವ ನಿರೀಕ್ಷೆಯಿದೆ. ಇದು ಲಿಂಗಾಯತ ಬಹುಸಂಖ್ಯಾತ ಪ್ರದೇಶವಾಗಿದೆ. ಕಾಂಗ್ರೆಸ್ 25-29 ಸ್ಥಾನಗಳನ್ನು ಗೆಲ್ಲಲಿದೆ, ಬಿಜೆಪಿ 21-25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ.
ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಹಿನ್ನಡೆ
ಕೇಸರಿ ಪಕ್ಷದ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಶೇ 38ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ಶೇ 41 ಮತಗಳನ್ನು ಗಳಿಸುವ ಸಾಧ್ಯತೆಯಿದೆ.ಈ ಭಾಗದ 35 ಸ್ಥಾನಗಳಲ್ಲಿ ಬಿಜೆಪಿ 12-16 ಸ್ಥಾನಗಳನ್ನು ಗೆಲ್ಲುತ್ತದೆ. ಆದರೆ ಕಾಂಗ್ರೆಸ್ 18-22 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಇನ್ನು ಜೆಡಿಎಸ್‌ಗೆ 2ಕ್ಕಿಂತ ಹೆಚ್ಚು ಸ್ಥಾನ ಸಿಗುವುದಿಲ್ಲ ಎನ್ನಲಾಗಿದೆ.
ಕರಾವಳಿ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ
ಕರಾವಳಿ ಕರ್ನಾಟಕದಲ್ಲಿ ಬಿಜೆಪಿ ಶೇ 46 ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಶೇ 41ರಷ್ಟು ಮತದಾರರ ಬೆಂಬಲವನ್ನು ಪಡೆಯುತ್ತದೆ. ಜೆಡಿಎಸ್ ಒಟ್ಟು ಮತಗಳ ಶೇ 6ಕ್ಕಿಂತ ಕಡಿಮೆ ಮತ ಪಡೆಯಲಿದೆ. ಕೇವಲ 21 ಸ್ಥಾನಗಳನ್ನು ಕರಾವಳಿ ಹೊಂದಿದ್ದು, ಬಿಜೆಪಿಯು ಕಾಂಗ್ರೆಸ್ ಪ್ರಬಲ ಪೈಪೋಟಿ ಬೀಳಲಿದೆ. ಬಿಜೆಪಿ 9-13 ಸ್ಥಾನಗಳು, ಕಾಂಗ್ರೆಸ್ 8 ರಿಂದ 12 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.
ಜೀ ನ್ಯೂಸ್ ಸಮೀಕ್ಷೆಯ ಪ್ರಕಾರ
ಬಿಜೆಪಿ- 96-106
ಕಾಂಗ್ರೆಸ್- 88-98
ಜೆಡಿಎಸ್- 23-33 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಇಂದು ಪ್ರಕಟಿಸಿದೆ.
ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರಬೀಳಲಿದೆ.
ಏಪ್ರಿಲ್ 13ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬರಲಿದೆ.
ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ರಾಜ್ಯದಲ್ಲಿ 5.22 ಕೋಟಿ ಮತದಾರರರಿದ್ದು, 2,62,42,561 ಪುರುಷ ಮತದಾರರು, 2,59,26,319 ಮಹಿಳಾ ಮತದಾರರು ಇದ್ದಾರೆ.
ಇದರಲ್ಲಿ 9,17,241 ಮೊದಲ ಬಾರಿ ಮತದಾರರು, 80 ವರ್ಷ ಮೇಲ್ಪಟ್ಟ 12,15,763 ಮತದಾರರು. ಅಂಗವಿಕಲರು 5,55,073 ಮತದಾರರು, 4,699 ತೃತೀಯ ಲಿಂಗಿ ಮತದಾರರು ಇದ್ದಾರೆ.
80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಈ ಬಾರಿ ಒಟ್ಟು 52,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 24,063 ನಗರ ಪ್ರದೇಶದಲ್ಲಿ, 34,219 ಗ್ರಾಮೀಣ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತದೆ. 12 ಸಾವಿರ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ವಿಶೇಷವಾಗಿ ಯುವ ಸಿಬ್ಬಂದಿ ಮಾತ್ರ ನಿರ್ವಹಿಸುವ 224 ಪ್ರತ್ಯೇಕ ಮತಗಟ್ಟೆ, ಮಹಿಳೆಯೇ ನಿರ್ವಹಿಸುವ 1320 ಮತಗಟ್ಟೆಗಳು ಇರುತ್ತವೆ. ಸರಾಸರಿ 883 ಮತದಾರರಿಗೊಂದು ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ.
ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಲೆಕ್ಕಾಚಾರ ಬಿರುಸಾಗಿದೆ. ಪ್ರಚಾರ ಕಾವೇರಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.