ಬೆಳಗಾವಿ: ‘ನಮಗೆ ಮದರಸಾಗಳು ಬೇಕಿಲ್ಲ. ರಾಷ್ಟ್ರ ನಿರ್ಮಾಣಕ್ಕಾಗಿ ವೈದ್ಯರು, ಎಂಜಿನಿಯರ್‌ಗಳು ಮತ್ತು ವೃತ್ತಿಪರರನ್ನು ಸೃಷ್ಟಿಸುವ ಶಾಲಾ- ಕಾಲೇಜು, ವಿಶ್ವವಿದ್ಯಾಲಯಗಳು ಬೇಕು’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಸರ್ಮಾ ಹೇಳಿದರು.
ಇಲ್ಲಿನ ಶಹಾಪುರದ ಶಿವಾಜಿ ಉದ್ಯಾನ ಬಳಿ ಗುರುವಾರ ನಡೆದ ‘ಶಿವಚರಿತ್ರೆ’ ಕಲಾಕೃತಿಗಳ ಪ್ರದರ್ಶನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಅಸ್ಸಾಂನಲ್ಲಿರುವ ಎಲ್ಲ ಮದರಸಾಗಳನ್ನು ಶೀಘ್ರ ಮುಚ್ಚಲು ನಿರ್ಧರಿಸಿದ್ದೇನೆ’ ಎಂದೂ ಹೇಳಿದರು.
‘ಕಮ್ಯುನಿಸ್ಟ್ ಇತಿಹಾಸಕಾರರು ಇಡೀ ದೇಶವೇ ಔರಂಗಜೇಬನ ಕೈಯಲ್ಲಿತ್ತು ಎಂದು ಬರೆದಿದ್ದಾರೆ. ಆದರೆ, ಶಿವಾಜಿ ಮಹಾರಾಜರು ಔರಂಗಜೇಬನಿಗಿಂತ ನೂರು ಪಟ್ಟು ಪರಾಕ್ರಮಿಯಾಗಿದ್ದರು. ಈ ದೇಶದ ಇತಿಹಾಸ ಬಾಬರ್, ಔರಂಗಜೇಬನದು ಎನ್ನುವ ಕಮ್ಯುನಿಷ್ಟರ ಇತಿಹಾಸ ಸುಳ್ಳು. ವಾಸ್ತವವಾಗಿ ಶಿವಾಜಿ, ಸ್ವಾಮಿ ವಿವೇಕಾನಂದ ಹಾಗೂ ಗುರುಗೋವಿಂದ ಸಿಂಗ್ ಅವರದ್ದು ಭಾರತದ ಇತಿಹಾಸ’ ಎಂದು ಹೇಳಿದರು.
‘ಭಾರತ ಸನಾತನ ಹಾಗೂ ಹಿಂದೂ ದೇಶವಾಗಿದೆ. ಸೂರ್ಯ- ಚಂದ್ರ ಇರುವವರೆಗೂ ಅದು ಸನಾತನ, ಹಿಂದೂ ದೇಶವಾಗಿಯೇ ಇರುವುದು ನಿಶ್ಚಿತ. ಸನಾತನ ಧರ್ಮದಿಂದ ದೇಶ ಗಟ್ಟಿಯಾಗಿದೆ. ನಾವೆಲ್ಲರೂ ಹಿಂದೂಗಳೆಂದು ಗರ್ವದಿಂದ ಹೇಳಬೇಕು’ ಎಂದು ಕರೆ ನೀಡಿದರು.
‘ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಮತ್ತಿತರ ಮಹಾನ್ ನಾಯಕರು ಭೇಟಿ ನೀಡಿದ ಈ ಪುಣ್ಯಭೂಮಿಗೆ ಬಂದಿರುವುದರಿಂದ ನನಗೆ ತೀರ್ಥಯಾತ್ರೆಗೆ ಬಂದ ಅನುಭವವಾಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.