ರಾಯಚೂರು: ಸಿಂಧನೂರಿನಲ್ಲಿ ನಿರ್ಮಾಣವಾಗಿರುವ ನೂತನ ರಂಗಮಂದಿರಕ್ಕೆ ಪುನೀತ್ ರಾಜ್ಕುಮಾರ್ ಹೆಸರಿಡುವ ವಿಚಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ತಳ್ಳಾಟ ನಡೆದಿದ್ದು, ಪಿಎಸ್‌ಐ ಮಣಿಕಂಠ ಥಳಿತಕ್ಕೊಳಗಾಗಿದ್ದಾರೆ.
ಸಿಂಧನೂರು ನಗರದ ಸುಕಾಲಪೇಟೆ ರಸ್ತೆಯಲ್ಲಿ ನೂತನ ರಂಗ ಮಂದಿರ ನಿರ್ಮಾಣವಾಗಿದ್ದು, ಸಿಂಧನೂರು ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ ನಾಡಗೌಡ ಪುನೀತ್ ರಾಜಕುಮಾರ್ ಹೆಸರಿಡಲು ಒತ್ತಾಯಿಸಿದ್ದಾರೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿರುವ ನಗರಸಭೆ ಪುನೀತ್ ಹೆಸರಿಡಲು ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯ ಕಲಾವಿದರ ಹೆಸರಿಡಲು ಮುಂದಾಗಿದೆ.
ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಗಲಾಟೆ ನಡೆದಿದ್ದು, ನಗರದ ಎಪಿಎಂಸಿಯಿಂದ ರಂಗಮಂದಿರದ ವರೆಗೆ ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ವಾಗ್ವಾದ ನಡೆದಿದೆ. ಈ ವೇಳೆ ಶಾಸಕರ ಪುತ್ರ ಅಭಿಷೇಕ್ ನಾಡಗೌಡ ಸಿಂಧನೂರು ಗ್ರಾಮೀಣ ಠಾಣೆ ಪಿಎಸ್‌ಐ ಮಣಿಕಂಠ ಅವರ ಕಾಲರ್ ಪಟ್ಟಿ ಎಳೆದು, ಹಲ್ಲೆ ಮಾಡಿದ್ದಾನೆ.