Breaking News

2023 : ಪಕ್ಷ, ನಾಯಕರ ಮೇಲೆ ಬಿಎಸ್‌ವೈ ಪ್ರಭಾವವನ್ನು ತಗ್ಗಿಸಲು ಬಿಜೆಪಿ ಹೈಕಮಾಂಡ್‌ ಬಿಗ್‌ ಪ್ಲ್ಯಾನ್‌?

Spread the love

ಬೆಂಗಳೂರು, ಮಾರ್ಚ್‌ 13: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭಾರತೀಯ ಜನತಾ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಲಿಂಗಾಯತ ಪ್ರಬಲ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪ್ರಭಾವವನ್ನು ಮಿತಿಗೊಳಿಸಲು ಕೇಂದ್ರ ನಾಯಕತ್ವದ ಕ್ರಮವಾಗಿದೆ.

ಬಿಜೆಪಿಯ ಆಂತರಿಕ ವಿಚಾರಗಳ ಬಗ್ಗೆ ತಿಳಿದಿರುವ ನಾಯಕರೊಬ್ಬರು ಇದನ್ನು ‘ಹಿಂದೂಸ್ತಾನ್‌ ಟೈಮ್ಸ್‌’ಗೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅನುಭವಿ ರಾಜಕಾರಣಿ ಯಡಿಯೂರಪ್ಪ ಅವರು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಯಡಿಯೂರಪ್ಪ ಮತ್ತು ಮೋದಿ ಮೇಲೆ ನಂಬಿಕೆ ಇಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ತಿಂಗಳ ಆರಂಭದಲ್ಲಿ ರಾಜ್ಯಕ್ಕೆ ಭೇಟಿದಾಗ ಹೇಳಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವನ್ನು ಸಾಧಿಸಬೇಕಿದೆ. ಇದು ಯಡಿಯೂರಪ್ಪ ಅವರ ಕನಸಾಗಿದೆ. ಇದನ್ನು ಈಡೇರಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದರು. ಯಡಿಯೂರಪ್ಪ ಅವರನ್ನು ಚುನಾವಣಾ ಪ್ರಚಾರ ಸಮಿತಿಯ (ಇಸಿಸಿ) ಮುಖ್ಯಸ್ಥರನ್ನಾಗಿ ಮಾಡಲಾಗುತ್ತದೆ ಎಂಬ ಊಹಾಪೋಹಗಳಿಗೆ ಈ ಎಲ್ಲಾ ಬೆಳವಣಿಗೆಗಳು ಪುಷ್ಠಿ ನೀಡಿದ್ದವು. ಆದರೆ ಕೇಂದ್ರ ನಾಯಕತ್ವವು ಶುಕ್ರವಾರ ಬೊಮ್ಮಾಯಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಿತು. ಅವರ ಅಡಿಯಲ್ಲಿ ಯಡಿಯೂರಪ್ಪ ಅವರನ್ನು ಸದಸ್ಯರನ್ನಾಗಿ ಮಾಡಲಾಯಿತು.

ಈ ಘೋಷಣೆಯು ವಿಶೇಷವಾಗಿ ಯಡಿಯೂರಪ್ಪ ಬೆಂಬಲಿಗರಲ್ಲಿ ಗೊಂದಲ ಮತ್ತು ನಿರಾಸೆಗೆ ಕಾರಣವಾಗಿದೆ. ಈಗ 80 ವರ್ಷ ವಯಸ್ಸಿನ ಯಡಿಯೂರಪ್ಪ ಅವರಿಗಿಂತ ಬೊಮ್ಮಾಯಿ ಅವರು ಉನ್ನತ ಸ್ಥಾನವನ್ನು (ಮುಖ್ಯಮಂತ್ರಿ) ವಹಿಸಿಕೊಂಡಿದ್ದಾರೆ. ಹೀಗಾಗಿ, ಬೊಮ್ಮಾಯಿ ಅವರ ಆಯ್ಕೆಯು ಪಕ್ಷದ ಸ್ವಾಭಾವಿಕ ಆಯ್ಕೆಯಾಗಿದೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ.

ಆದರೆ, ಈ ಎಲ್ಲದಕ್ಕೂ ವಿರೋಧವಾಗಿ ಹೊಸ ವಾದವೊಂದು ಹುಟ್ಟಿಕೊಂಡಿದೆ. ಯಡಿಯೂರಪ್ಪನವರು ಪಕ್ಷದ ವ್ಯವಹಾರಗಳ ಮೇಲೆ ಹಿಡಿತ ಸಾಧಿಸುವುದನ್ನು ಬಿಎಲ್‌ ಸಂತೋಷ್‌ ವಿರೋಧಿಸುತ್ತಿದ್ದಾರೆ. ಪ್ರಚಾರ ಸಮಿತಿ ರಚನೆಯ ಹಿಂದೆ ಅವರದ್ದೇ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಬಿಎಲ್ ಸಂತೋಷ್ ಮತ್ತು ಯಡಿಯೂರಪ್ಪ ಅವರ ನಡುವೆ ಭಿನ್ನಾಭಿಪ್ರಾಯ ಇರುವುದು ಪಕ್ಷದಲ್ಲಿ ಗುಟ್ಟಾಗಿ ಉಳಿದಿಲ್ಲ. ಆರೆಸ್ಸೆಸ್ ಬಣವು ಪಕ್ಷದ ಕಾರ್ಯನಿರ್ವಹಣೆಯ ಮೇಲೆ ನಿಯಂತ್ರಣವನ್ನು ಬಯಸುತ್ತದೆ. ಆದರೆ ಪಕ್ಷದ ಗೆಲುವಿಗೆ ಯಡಿಯೂರಪ್ಪ ನಿರ್ಣಾಯಕ ಎಂದು ಅವರಿಗೆ ತಿಳಿದಿದೆ. ಹೀಗಾಗಿ, ಇಂತಹ ನಿರ್ಧಾರವನ್ನು ಬಿಎಲ್‌ ಸಂತೋ‍ಷ್‌ ತೆಗೆದುಕೊಂಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ.

ಆರೆಸ್ಸೆಸ್ ಬಣವು ಪ್ರಸ್ತಾಪಿಸಿದ ಚುನಾವಣಾ ತಂತ್ರಗಳಾದ ಹಿಜಾಬ್ ಮತ್ತು ಹಲಾಲ್ ವಿವಾದಗಳನ್ನು ಯಡಿಯೂರಪ್ಪ ವಿರೋಧಿಸುವುದು ಈ ಬಣದ ಅನೇಕರಿಗೆ ಸರಿ ಅನ್ನಿಸಿಲ್ಲ ಎಂದು ಹಿರಿಯ ಶಾಸಕ ತಿಳಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಇಸಿಸಿ ಮುಖ್ಯಸ್ಥರನ್ನಾಗಿ ನೇಮಿಸಲು ವಿರೋಧವಿದೆ. ಏಕೆಂದರೆ, ಇದು ಬಿಎಸ್‌ವೈ ಕಿರಿಯ ಪುತ್ರ ಬಿವೈ ವಿಜಯೇಂದ್ರಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ ಎಂದು ಮತ್ತೊಬ್ಬ ಬಿಜೆಪಿ ಮುಖಂಡರು ಹೇಳಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದರೂ ವಿಜಯೇಂದ್ರ ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ವಿಜಯೇಂದ್ರ ಅವರ ಆಡಳಿತದ ನಿಯಂತ್ರಣವನ್ನು ಹಲವಾರು ನಾಯಕರು ಆಗಲೇ ವಿರೋಧಿಸಿದ್ದರು ಎಂದು ಮತ್ತೊಬ್ಬ ಬಿಜೆಪಿ ನಾಯಕ ತಿಳಿಸಿದ್ದಾರೆ..

25 ಸದಸ್ಯರ ಕರ್ನಾಟಕ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯು ಶುಕ್ರವಾರ ಪ್ರಕಟಿಸಿದ್ದು, ಯಡಿಯೂರಪ್ಪ ಮತ್ತು ವಿಜಯೇಂದ್ರ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್, ಹಲವಾರು ಕೇಂದ್ರ ಸಚಿವರು ಮತ್ತು ಪ್ರಮುಖ ಜಾತಿ ನಾಯಕರು ಸೇರಿದಂತೆ ರಾಜ್ಯದ ಹಿರಿಯ ನಾಯಕರ ಸದಸ್ಯರಾಗಿದ್ದಾರೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ