Breaking News

ರಾಜ್ಯಪಾಲರಿಗೆ ಡಾ.ಕೋರೆ ಪತ್ರ

Spread the love

ಬೆಳಗಾವಿ: ‘ಬೆಳಗಾವಿಯಿಂದ ದೆಹಲಿ, ಮುಂಬೈ, ಪುಣೆ ಮುಂತಾದ ಕಡೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ವಿಮಾನ ಸಂಸ್ಥೆಗಳು ಲಾಭದಾಯಕವಾಗಿ ನಡೆಯುತ್ತಿದ್ದರೂ ಹಾರಾಟ ನಿಲ್ಲಿಸಿದ್ದು ಸಮಂಜಸವಲ್ಲ. ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮೊದಲಿದ್ದ ಎಲ್ಲ ವಿಮಾನಗಳನ್ನೂ ಮರು ಹಾರಾಟ ಆರಂಭಿಸಲು ಕ್ರಮ ವಹಿಸಬೇಕು’ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಪತ್ರ ಬರೆದಿದ್ದಾರೆ.

 

ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿ ಎಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ಚಳಿಗಾಲದ ಅಧಿವೇಶನ ಕೂಡ ನಡೆಯುತ್ತದೆ. ಆರ್ಥಿಕ, ಆರೋಗ್ಯ ವಿಜ್ಞಾನ, ಕೈಗಾರಿಕೆ, ಔದ್ಯೋಗಿಕ ಕ್ಷೇತ್ರದಲ್ಲಿ ಧಾಪುಗಾಲು ಇಟ್ಟಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕೆಎಲ್‌ಇ ವಿಶ್ವವಿದ್ಯಾಲಯ ಸೇರಿ ಮೂರು ಬೃಹತ್‌ ವಿಶ್ವವಿದ್ಯಾಲಯಗಳು ಇಲ್ಲಿವೆ. ನಗರವು ಶೈಕ್ಷಣಿಕ ಹಬ್‌ ಆಗಿ ಬೆಳೆಯುತ್ತಿದೆ. ವಿದೇಶಿ ಪ್ರವಾಸಿಗರ ಆಗಮನ- ನಿರ್ಗಮನವೂ ಹೆಚ್ಚಿದೆ. ಶೈಕ್ಷಣಿಕ ಹಾಗೂ ಆರೋಗ್ಯ ಸಂಬಂಧಿ ವಿಷಯಗಳಿಗೆ ಬರುವ ಪ್ರಯಾಣಿಕರ ಸಂಖ್ಯೆ ದೊಡ್ಡದು. ಆದರೆ, ವಿಮಾನ ಹಾರಾಟ ನಿಲ್ಲಿಸಿದ್ದರಿಂದ ಇವರೆಲ್ಲರಿಗೂ ತೊಂದರೆಯಾಗಿದೆ ಎಂದು ಅವರು ಪತ್ರದಲ್ಲಿ ಮನವರಿಕೆ ಮಾಡಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣವು ರಾಜ್ಯದ ಮೂರನೇ ಹಳೆಯ ಹಾಗೂ ದೊಡ್ಡ ವಿಮಾನ ನಿಲ್ದಾಣ ಎಂಬ ಕೀರ್ತಿ ಪಡೆದಿದೆ. ಉಡಾನ್‌ ಯೋಜನೆ ಒಳಪಟ್ಟ ದಿನಗಳಿಂದ ಪ್ರತಿ ದಿನ 13 ರೂಟ್‌ಗಳಲ್ಲಿ ವಿಮಾನ ಹಾರಾಟ ನಡೆಯುತ್ತಿತ್ತು. ಕನಿಷ್ಠ 32ರಿಂದ ಗರಿಷ್ಠ 40 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಸ್ಪೈಸ್‌ಜೆಟ್‌, ಅಲಯನ್ಸ್‌ ಏರ್‌, ಟ್ರೂ ಜೆಟ್‌, ಇಂಡಿಗೋ ಮತ್ತು ಸ್ಟಾರ್‌ ಏರ್‌ನ ವಿಮಾನಗಳು ಹಾರಾಡುತ್ತಿದ್ದವು. ಆದರೆ, ಉಡಾನ್‌ ಯೋಜನೆ ಬಂದ್‌ ಆದ ತಕ್ಷಣ ಬಹುಪಾಲು ವಿಮಾನ ಕಂಪನಿಗಳು ವಿಮಾನ ಹಾರಾಟ ನಿಲ್ಲಿಸಿವೆ.

ಸದ್ಯ ಇಂಡಿಗೊ, ಸ್ಟಾರ್‌ ಏರ್‌ ವಿಮಾನ ಸಂಸ್ಥೆ ಮಾತ್ರ ಸೇವೆ ಒದಗಿಸುತ್ತಿದೆ. ಬೆಂಗಳೂರು ಮತ್ತಿತರ ನಗರಗಳೂ ಸೇರಿ 14ರಿಂದ 16 ವಿಮಾನಗಳು ಮಾತ್ರ ಹಾರಾಡುತ್ತಿವೆ.

ಕಾರಣ, ತಾವು ಕೇಂದ್ರ ನಾಗರಿಕ ವಿಮಾನ ಯಾನ ಸಚಿವರ ಗಮನಕ್ಕೆ ತಂದು ಬೆಳಗಾವಿಯ ವಿಮಾನ ಸಂಪರ್ಕಗಳನ್ನು ಪುನರ್‌ ಆರಂಭಿಸಬೇಕು ಎಂದೂ ಡಾ.ಪ್ರಭಾಕರ ಕೋರೆ ಪತ್ರದಲ್ಲಿ ಕೋರಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ