ಬೆಳಗಾವಿ: ‘ಪೊಲೀಸರು ತರಬೇತಿಯಲ್ಲಿ ಕಲಿತ ಪ್ರತಿಯೊಂದು ಕೌಶಲ ಮತ್ತು ಸಾಮರ್ಥ್ಯವನ್ನು ವೃತ್ತಿ ಜೀವನದಲ್ಲಿ ನಿರಂತರವಾಗಿ ಕಾಪಾಡಿಕೊಂಡು ಹೋಗಬೇಕು. ಅಂದಾಗ ಮಾತ್ರ ವೃತ್ತಿಯಲ್ಲಿ ಯಶಸ್ಸು ಗಳಿಸುವುದು ಸಾಧ್ಯ’ ಎಂದು ಕರ್ನಾಟಕ ರಾಜ್ಯ ಮೀಸಲು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಸಲಹೆ ನೀಡಿದರು.
ಇಲ್ಲಿನ ಕಂಗ್ರಾಳಿಯ ಕೆಎಸ್‌ಆರ್‌ಪಿ ತರಬೇತಿ ಶಾಲೆಯ 9ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೆಬಲ್, ಬ್ಯಾಂಡ್ಸ್‌ಮನ್, ಪ್ರಥಮ ತಂಡದ ಅಗ್ನಿಶಾಮಕ ಪ್ರಶಿಕ್ಷಣಾರ್ಥಿಗಳ ಹಾಗೂ ಮುನಿರಾಬಾದ್‌ನ ದ್ವಿತೀಯ ತಂಡದ ಅಗ್ನಿಶಾಮಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಂಥ ಸಂಚಲನ ಪರಿವೀಕ್ಷಿಸಿ ಹಾಗೂ ಬಹುಮಾನ ವಿತರಿಸಿ ಅವರು ಮಾತನಾಡಿದರು.
‘ತರಬೇತಿಯ ಬಳಿಕ ಸೇವೆಗೆ ಸೇರಿದಾಗ ಜವಾಬ್ದಾರಿ ಹೆಚ್ಚಾಗುತ್ತದೆ. ಅದನ್ನು ಸಮರ್ಥವಾಗಿ ನಿಭಾಯಿಸಲು ತರಬೇತಿ ಅವಧಿಯಲ್ಲಿ ಕಲಿಕೆಯು ನೆರವಿಗೆ ಬರಲಿದೆ. ಕಂಗ್ರಾಳಿ ತರಬೇತಿ ಶಾಲೆಯ ಪ್ರಾಂಶುಪಾಲರ ಶಿಸ್ತು ಮತ್ತು ಶ್ರದ್ಧೆಯ ಫಲವಾಗಿ ಎಲ್ಲರೂ ಅತ್ಯುತ್ತಮ ತರಬೇತಿ ಪಡೆದುಕೊಂಡಿದ್ದು, ಮುಂಬರುವ ವೃತ್ತಿಜೀವನದಲ್ಲಿ ಅತ್ಯುತ್ತಮ ಸೇವೆ ನೀಡಬೇಕು’ ಎಂದರು.
ಕೆಎಸ್‌ಆರ್‌ಪಿ ತರಬೇತಿ ಶಾಲೆ ಕಂಗ್ರಾಳಿ ಪ್ರಾಂಶುಪಾಲ ರಮೇಶ ಎ. ಬೋರಗಾವೆ, ‘6 ದಶಕಗಳಿಂದ ಧೈರ್ಯ, ಶಿಸ್ತು, ಪರಿಶ್ರಮ ತ್ಯಾಗ ಬಲಿದಾನಗಳಿಂದ ಯಶೋಗಾಥೆಯನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯು ಹೊಂದಿದೆ. ಮೀಸಲು ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿ ಕೆಎಸ್‌ಆರ್‌ಪಿ ಕಾರ್ಯನಿರ್ವಹಿಸುತ್ತದೆ’ ಎಂದು ಹೇಳಿದರು.