Breaking News

ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

Spread the love

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್‌) ನಿಯಮಿತದ ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪಕ್ಕೆ ಗುರಿಯಾಗಿ ಬಂಧನದ ಭೀತಿ ಎದುರಿಸುತ್ತಿದ್ದ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ.ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

 

ಈ ಸಂಬಂಧ ವಿರೂಪಾಕ್ಷಪ್ಪ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರು ಮಂಗಳವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಕೆ.ಸುಮನ್ ಅವರು, “ಎಫ್ ಐ ಆರ್ ನಲ‌್ಲಿ ಅರ್ಜಿದಾರರ ವಿರುದ್ಧ ಆರೋಪ ಸಾಬೀತುಪಡಿಸಲು ಯಾವುದೇ ಸಾಕ್ಷಿಗಳಿಲ್ಲ. ಟೆಂಡರ್ ಗೆ ಲಂಚ ನೀಡುವಂತೆ 30ರಷ್ಟು ಕಮಿಷನ್ ಬೇಡಿಕೆ ಇಟ್ಟಿರುವ ಬಗ್ಗೆ, ಪ್ರಯತ್ನ ನಡೆಸಿರುವ ಬಗ್ಗೆ ಅಥವಾ ನಿರ್ದಿಷ್ಟ ದಿನದಂದು ಲಂಚ ಕೊಡುವಂತೆ ಕೇಳಿದ ಬಗ್ಗೆ ಇನಿತೂ ಸಾಕ್ಷಿ ಇಲ್ಲ. ಮಗ ಮತ್ತು ತಂದೆಗೆ ಇದರಲ್ಲಿ ಯಾವುದೇ ಸಂಬಂಧ ಇಲ್ಲ. ವಿರೂಪಾಕ್ಷಪ್ಪ ಅವರಿಗೀಗ 75 ವರ್ಷ. ನಾಲ್ಕು ಬಾರಿ ಶಾಸಕರು. ಮೇಲಾಗಿ ಹೃದಯ ಸಂಬಂಧಿತ ಸಮಸ್ಯೆ ಹೊಂದಿದ್ದಾರೆ. ವಿಚಾರಣೆಗೆ ಹಾಜರಾದರೆ ಲೋಕಾಯುಕ್ತ ಪೊಲೀಸರು ಬಂಧಿಸುವ ಭೀತಿ ಇದೆ. ಆದ್ದರಿಂದ, ನಿರೀಕ್ಷಣಾ ಜಾಮೀನು ನೀಡಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ‌ ಲೋಕಾಯುಕ್ತ ಪರ ಹಾಜರಾಗಬೇಕಿದ್ದ ವಕೀಲ ಬಿ.ಬಿ.ಪಾಟೀಲ ಅವರು ಗೈರಾಗಿದ್ದರು. ಅವರ ಕಚೇರಿಯ ಕಿರಿಯ ವಕೀಲ ಪ್ರತಿವಾದ ಮಂಡಿಸಿ. ‘ಈ ಪ್ರಕರಣದಲ್ಲಿ ತನಿಖಾಧಿಕಾರಿಯಿಂದ ಹೆಚ್ಚಿನ ವಿವರಣೆ ಪಡೆಯಬೇಕಿದೆ’ ಎಂದರು.

ಉಭಯತ್ರರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಆರೋಪಿ ವಿರೂಪಾಕ್ಷಪ್ಪ ಮುಂದಿನ 48 ಗಂಟೆಗಳ ಒಳಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಈ ವೇಳೆ ತನಿಖಾಧಿಕಾರಿಯು ಆರೋಪಿಯನ್ನು ಬಂಧಿಸಬಾರದು ಎಂದು ಆದೇಶಿಸಿದರು.

ಷರತ್ತುಗಳು

* ಆರೋಪಿ ವೈಯಕ್ತಿಕ ₹ 5 ಲಕ್ಷ ಮೊತ್ತದ ಬಾಂಡ್ ಸಲ್ಲಿಸಬೇಕು.

* ಇಬ್ಬರು ಭದ್ರತೆ ಕೊಡಬೇಕು.

* ಸಾಕ್ಷಿ ನಾಶಕ್ಕೆ ಪ್ರಯತ್ನಿಸಬಾರದು.

* ತನಿಖೆಗೆ ಸಹಕರಿಸಬೇಕು.

ಮುಂದಿನ ವಿಚಾರಣೆಯನ್ನು ಇದೇ 17ಕ್ಕೆ ನಿಗದಿಡಿಸಲಾಗಿದೆ.

ಅರ್ಜಿಯಲ್ಲಿ ಏನಿದೆ?: ‘ನನ್ನ ವಿರುದ್ಧ ಕಾನೂನು ಬಾಹಿರವಾಗಿ ಮತ್ತು ಕಿರುಕುಳ ಕೊಡುವ ದುರುದ್ದೇಶದಿಂದ ಎಫ್‌ಐಆರ್ ದಾಖಲು ಮಾಡಲಾಗಿದೆ. ನಾನು ಲಂಚವನ್ನು ಕೇಳಿಯೂ ಇಲ್ಲ ಮತ್ತು ಪಡೆದೂ ಇಲ್ಲ. ಪ್ರಕರಣದಲ್ಲಿ ನನ್ನನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ವಿಚಾರಣೆ ವೇಳೆ ಪೊಲೀಸರು ನನ್ನನ್ನು ಬಂಧಿಸುವ ಭೀತಿ ಇದೆ. ಆದ್ದರಿಂದ, ನನಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಪ್ರಕರಣವೇನು?: ‘ವಿರೂಪಾಕ್ಷಪ್ಪ ಅವರ ಪುತ್ರರೂ ಆದ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳು ಟೆಂಡರ್‌ ಪ್ರಕ್ರಿಯೆಯಲ್ಲಿ ₹ 40 ಲಕ್ಷ ಲಂಚ ಪಡೆದಿದ್ದಾರೆ’ ಎಂದು ಆರೋಪಿಸಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಇದೇ 2ರಂದು ಎಫ್‌ಐಆರ್‌ ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 7 (ಎ) ಮತ್ತು (ಬಿ), 7 ಎ, 8, 9 ಮತ್ತು 10ರ ಅಡಿಯಲ್ಲಿ ದಾಖಲಿಸಿರುವ ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಪ್ರಶಾಂತ್ ಮಾಡಾಳು ಎರಡನೇ ಆರೋಪಿ.


Spread the love

About Laxminews 24x7

Check Also

ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ

Spread the loveನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಅಲ್ಪಾವಧಿ ಕೃಷಿ ಸಾಲದ ಮಿತಿ ಹೆಚ್ಚಿಸುವಂತೆ ಮನವಿಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ