ಬೆಳಗಾವಿ: ರಾಜ್ಯದಲ್ಲಿಯೇ ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವವನ್ನು ಬೆಳಗಾವಿ ನಗರದಲ್ಲಿ ಆಚರಿಸಲಾಗುತ್ತಿದ್ದು, ಲಕ್ಷಾಂತರ ಜನರು ಭಾಗವಹಿಸುತ್ತಾರೆ. ರಾಜ್ಯೋತ್ಸವವನ್ನ ಸಡಗರದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಅನುಕೂಲವಾಗುವಂತೆ ಪ್ರಾಧಿಕಾರದ ವತಿಯಿಂದ ಪ್ರತಿವರ್ಷ ಐದು ಲಕ್ಷ ರೂಪಾಯಿ ಅನುದಾನ ನೀಡಲಾಗುವುದು ಎಂದು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಪ್ರಕಟಿಸಿದರು.
ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳು, ಯೋಜನೆಗಳು ಮತ್ತು ಜಿಲ್ಲೆಯ ಗಡಿ ಭಾಗಗಳಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ವಿಶೇಷ ಅನುದಾನ ನೀಡಬೇಕು ಎಂಬುದು ಇಲ್ಲಿನ ಜನರ ಹಾಗೂ ಕನ್ನಡಪರ ಸಂಘಟನೆಗಳ ಬಹುದಿನಗಳ ಬೇಡಿಕೆಯಾಗಿದೆ. ಇತ್ತೀಚಿನ ಕನ್ನಡ ರಾಜ್ಯೋತ್ಸವದಲ್ಲಿ ಮೂರು ಲಕ್ಷ ಜನರು ಸ್ವಯಂಪ್ರೇರಣೆಯಿಂದ ಸೇರಿದ್ದರು. ಆದ್ದರಿಂದ ಪ್ರಾಧಿಕಾರದ ವತಿಯಿಂದ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಭೆಯಲ್ಲಿ ವಿನಂತಿಸಿದರು.
ಇದಕ್ಕೆ ತಕ್ಷಣವೇ ಸ್ಪಂದಿಸಿದ ಪ್ರಾಧಿಕಾರದ ಅಧ್ಯಕ್ಷರು, ಪ್ರಾಧಿಕಾರದಿಂದ ಪ್ರತಿವರ್ಷ ಐದು ಲಕ್ಷ ರೂಪಾಯಿ ನೀಡುವುದಾಗಿ ಸಭೆಯಲ್ಲಿಯೇ ಘೋಷಿಸಿದರು.