ಬೆಂಗಳೂರು: ಹಿಂದುಳಿದ ವರ್ಗಗಳ ‘2ಎ’ ಮೀಸಲಾತಿಗೆ ಪಂಚಮಸಾಲಿ ಸಮಾಜ ಸೇರ್ಪಡೆಗೊಳಿಸಲು ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಮಾರ್ಚ್ 4ಕ್ಕೆ 50 ದಿನಗಳನ್ನು ಪೂರೈಸುತ್ತಿದ್ದು, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ಪಂಚಮಸಾಲಿ ಸಮಾಜ ನಿರ್ಧರಿಸಿದೆ.
ಮಾರ್ಚ್ 4 ರಂದು ಪಂಚಮಸಾಲಿ ಸಮಾಜದ ಜನರು ರಾಜ್ಯದ ಎಲ್ಲೆಡೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಗ್ರಾಮ ರಸ್ತೆಗಳನ್ನು ಬಂದ್ ಮಾಡಬೇಕು. ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗುರುವಾರ
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತು ಕೊಟ್ಟು ತಪ್ಪಿದ್ದಾರೆ. 26 ತಿಂಗಳಿನಿಂದ ನಿರಂತರ ಹೋರಾಟ ನಡೆಸಿದರೂ, ಸರ್ಕಾರದ ಸ್ಪಂದನೆ ದೊರೆತಿಲ್ಲ. ಪಂಚಮಸಾಲಿ, ಗೌಡ ಮಲೇಗೌಡ, ದೀಕ್ಷಾ ಲಿಂಗಾಯತ ಚಳವಳಿ ಹತ್ತಿಕ್ಕಲು ಸರ್ಕಾರದ ಸಚಿವರೇ ಪ್ರಯತ್ನಿಸಿದ್ದಾರೆ. ಹೃದಯವಿಲ್ಲದ ಈ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಚಿವರು ಹೋರಾಟಗಾರರನ್ನು ಮಾತು ಕತೆಗೂ ಕರೆದಿಲ್ಲ ಎಂದು ಆಕ್ರೋಶ
ವ್ಯಕ್ತಪಡಿಸಿದರು.