ಬೆಳಗಾವಿ: ‘ಮಾರ್ಚ್ 2ರಿಂದ 20ರವರೆಗೆ ಕಿತ್ತೂರು ಕರ್ನಾಟಕ ಭಾಗದ 58 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಮಾರ್ಚ್ 2ರಂದು ಮಧ್ಯಾಹ್ನ 12ಕ್ಕೆ ನಂದಗಡದಲ್ಲಿ ಇದಕ್ಕೆ ಚಾಲನೆ ನೀಡುವರು’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ’ ಎಂದರು.
‘ರಾಜ್ಯದ ನಾಲ್ಕು ಭಾಗಗಳಲ್ಲಿ ವಿಷಯ ಸಂಕಲ್ಪ ಯಾತ್ರೆಗಳು ಏಕಕಾಲಕ್ಕೆ ಆರಂಭವಾಗಲಿವೆ. ಮೈಸೂರು ಭಾಗದ ಯಾತ್ರೆಯು ಮಲೆಮಹದೇಶ್ವರ ಬೆಟ್ಟದಿಂದ, ಬೆಳಗಾವಿ ವಿಭಾಗದ ಯಾತ್ರೆಯು ರಾಯಣ್ಣನ ನಂದಗಡದಿಂದ, ಕಲ್ಯಾಣ ಕರ್ನಾಟಕದ ಯಾತ್ರೆಯು ಬಸವಕಲ್ಯಾಣದಿಂದ, ಬೆಂಗಳೂರು ಭಾಗದ ಯಾತ್ರೆ ಕೆಂಪೇಗೌಡರ ಕಾರ್ಯಸ್ಥಳದಿಂದ ಆರಂಭವಾಗಲಿವೆ’ ಎಂದರು.