Breaking News

ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿದ ಡಾ| ಹಿಮ್ಮಡಿ; ದಳವಾಯಿ

Spread the love

ರಾಯಬಾಗ: ಒಬ್ಬ ಅಧ್ಯಾಪಕನನ್ನು ಆತನ ವಿದ್ಯಾರ್ಥಿಗಳು ಮಾತ್ರ ಸರಿಯಾಗಿ ಬಲ್ಲವರಾಗಿರುತ್ತಾರೆ. ಹಿಮ್ಮಡಿಯವರ ವಿದ್ಯಾರ್ಥಿ ಬಳಗ ನೋಡಿದರೆ, ಅವರ ಬೋಧನೆ ಎಂತಹದ್ದು ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಹೇಳಿದರು.

 

ಪಟ್ಟಣದ ಮಹಾವೀರ ಭವನದಲ್ಲಿ ಡಾ| ಯಲ್ಲಪ್ಪ ಹಿಮ್ಮಡಿ ಅವರ ಸೇವಾ ನಿವೃತ್ತಿ ಪ್ರಯುಕ್ತ ವಿದ್ಯಾರ್ಥಿ ಬಳಗದಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಂದ ವಿಚಾರ ಸಮರ್ಪಣೆ, ಗುರುವಿಗೆ ವಂದನೆ, ಶಿಷ್ಯರಿಗೆ ಅಭಿನಂದನೆ ಹಾಗೂ ಡಾ|ಹಿಮ್ಮಡಿ ದಂಪತಿಗೆ ಅಭಿನಂದನೆ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿ, ವೈಚಾರಿಕ ಪ್ರಜ್ಞೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಅವರನ್ನು ಕ್ರಿಯಾಶೀಲಗೊಳಿಸಿದವರು ಡಾ.ಹಿಮ್ಮಡಿಯವರು.

ಅವರು ಸಾಕಷ್ಟು ವಿದ್ಯಾರ್ಥಿಗಳಿಗೆ ಮಾದರಿ ವ್ಯಕ್ತಿಯಾಗಿ, ಮಾರ್ಗದರ್ಶಕರಾಗಿದ್ದಾರೆ. ಕನ್ನಡ ಪ್ರಾಧ್ಯಾಪಕ ಏನೆಲ್ಲ ಮಾಡಬಹುದು ಎಂಬುದನ್ನು ತೋರಿಸಿದ್ದಾರೆಂದರು. ಇತಿಹಾಸ ತಜ್ಞ ಡಾ.ಶಿವರುದ್ರ ಕಲ್ಲೋಳಿಕರ ಮಾತನಾಡಿ, ಸಮಾಜಕ್ಕೆ ದಿಕ್ಸೂಚಿಯಾಗಬಲ್ಲ ವಿದ್ಯಾರ್ಥಿಗಳನ್ನು ರೂಪಿಸಿರುವ ಕೀರ್ತಿ ಹಿಮ್ಮಡಿಯವರಿಗೆ ಸಲ್ಲುತ್ತದೆ. ಅವರ ತೀಕ್ಷ್ಣ, ನಿಷ್ಠುರ ವಿಮರ್ಶೆಯಿಂದ ಅನೇಕರಿಗೆ ಇರುಸು ಮುರುಸು ಕೂಡ ಆಗಿರುವುದು ಕಾಣುತ್ತೇವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬಸವಬೆಳವಿ ಚ.ಚ. ವಿರಕ್ತಮಠದ ಶರಣಬಸವ ದೇವರು ಮಾತನಾಡಿ, ಡಾ.ಹಿಮ್ಮಡಿಯವರ ಬರವಣಿಗೆ ಓದಿಕೊಂಡು, ಎಲ್ಲೆಡೆ ಪ್ರಸಾರ ಮಾಡುವುದರ ಮೂಲಕ ತಾವು ಕೂಡ ವೈಚಾರಿಕ ಮತ್ತು ಪ್ರಗತಿಪರ ಎಂದು ಗುರ್ತಿಸಿಕೊಂಡಿದ್ದೇವೆ. ಹಿಮ್ಮಡಿಯವರ ಕೃತಿಗಳ ಮೌಲ್ಯಗಳನ್ನು ಗುರ್ತಿಸುವ ಕೆಲಸ ನಡೆಯದಿರುವುದು ಅತ್ಯಂತ ಖೇದಕರ ಎನ್ನಿಸುತ್ತದೆ. ಚನ್ನಬಸವಣ್ಣನವರ ವಚನಗಳಲ್ಲಿರುವ ಬಂಡಾಯ ಪ್ರಜ್ಞೆಯನ್ನು ಗುರ್ತಿಸಿದವರು ಡಾ| ಹಿಮ್ಮಡಿಯವರು. ನಾಸ್ತಿಕರೊಳಗೆ ಸ್ವಾತಿಕ ಬದುಕನ್ನು ಬದುಕಿದವರು ಡಾ.ವೈ.ಬಿ.ಹಿಮ್ಮಡಿಯವರು.ಅವರಿಗೆ ವಿದ್ಯಾರ್ಥಿ ಬಳಗ ನೀಡಿರುವ ಈ ಅಭಿನಂದನೆ ಸಮರ್ಪಣೆಗಿಂತ ದೊಡ್ಡ ಪ್ರಶಸ್ತಿ ಬೇರೆ ಯಾವುದು ಇಲ್ಲವೆಂದು ಹೇಳಿದರೆ ತಪ್ಪಲ್ಲ ಎಂದರು.

ಡಾ| ಹಿಮ್ಮಡಿ ಅಭಿನಂದನಾ ಸಮಿತಿ ಅಧ್ಯಕ್ಷ ಸದಾಶಿವ ದೇಸಿಂಗೆ ಅಧ್ಯಕ್ಷತೆ ವಹಿಸಿದ್ದರು. ಡಾ| ಕೆ.ಎನ್‌.ದೊಡ್ಡಮನಿ, ಡಾ| ವಿಜಯಮಾಲಾ ನಾಗನೂರಿ, ರಾಜು ಸನದಿ, ಈರಣ್ಣ ಬೆಟಗೇರಿ, ಅನಿತಾ ಲಂಗೋಟಿ ಅವರು ವಿದ್ಯಾರ್ಥಿಗಳು ಕಂಡಂತೆ ಡಾ.ಹಿಮ್ಮಡಿ ಮತ್ತು ಅವರ ಸಾಹಿತ್ಯ ಬಗ್ಗೆ ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಡಾ.ಯಲ್ಲಪ್ಪ ಹಿಮ್ಮಡಿ ದಂಪತಿಯನ್ನು ಸತ್ಕರಿಸಲಾಯಿತು. ವಿಜಯಪೂರದ ಕ.ರಾ. ಮಹಿಳಾ ವಿ.ವಿ. ಪ್ರಾಧ್ಯಾಪಕ ಡಾ.ವಿಷ್ಣು ಶಿಂಧೆ, ಬಿ.ಆರ್‌.ನಾಯ್ಕರ, ಪ್ರೊ.ಎಲ್‌.ವಿ.ಪಾಟೀಲ, ಡಾ.ಮಂಜುಳಾ ಸವದತ್ತಿ, ಫಿರ್ದೋಶ ಮುಶ್ರಫ್‌, ಡಾ.ಅರುಣ ಕಾಂಬಳೆ, ರಸೂಲ ಮೊಮಿನ, ಸುರೇಶ ಅಮ್ಮಿನಬಾವಿ, ಸುಖದೇವ ಕಾಂಬಳೆ, ರಾಯಪ್ಪ ಗೊಂಡೆ, ಸನ್ಮತಿ ಶೆಟ್ಟಿ, ಪ್ರತಿಭಾ ಮಾರಾಪೂರೆ, ಮನೋಹರ ಕಾಂಬಳೆ, ಶಶಿಕಾಂತ ತಾರದಾಳೆ, ಅಶೋಕ ಅಂಗಡಿ, ಸಾಗರ ಝೆಂಡೆನ್ನವರ, ಗಣೇಶ ಕಾಂಬಳೆ ಸೇರಿದಂತೆ ಡಾ.ಹಿಮ್ಮಡಿಯವರ ಶಿಷ್ಯ ವೃಂದ ಹಾಗೂ ಅಭಿಮಾನಿಗಳು ಇದ್ದರು. ಶ್ರೀಧರ ಕಿಚಡೆ ಸ್ವಾಗತಿಸಿದರು, ಸರಸ್ವತಿ ಆಲಖನೂರೆ ನಿರೂಪಿಸಿದರು, ಶಂಕರ ಕೊಡತೆ ವಂದಿಸಿದರು.


Spread the love

About Laxminews 24x7

Check Also

ಕುರಿ ಕಾಯುವವನ ಮಗನ ಯುಪಿಎಸ್ಸಿ ಸಾಧನೆ

Spread the loveಬೆಳಗಾವಿ: ತಂದೆ ಕುರಿ ಕಾಯುತ್ತಾರೆ. ತಾಯಿ ಹೊಲದಲ್ಲಿ ಕೆಲಸ ಮಾಡುತ್ತಾರೆ. ಮನೆಯಲ್ಲಿ ಬಡತನ. ಮಗನಿಗೆ ಮಾತ್ರ ಇಡೀ ದೇಶವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ