ಚೆನ್ನೈ: ಸತ್ತಿದ್ದಾರೆ ಎಂದು ರಾತ್ರಿ ಪೂರ್ತಿ ಫ್ರೀಜರ್ ಬಾಕ್ಸಿನಲ್ಲಿಟ್ಟ 74 ವರ್ಷದ ವೃದ್ಧರೊಬ್ಬರು ಬೆಳಗ್ಗೆ ಆ ಪೆಟ್ಟಿಗೆಯೊಳಗೆ ಉಸಿರಾಡುತ್ತಿರುವ ವಿಚಿತ್ರ ಘಟನೆ ತಮಿಳುನಾಡಿ ಸೇಲಂನಲ್ಲಿ ನಡೆದಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಕಂಧಂಪತ್ತಿಯ ನಿವಾಸಿ 74 ವರ್ಷದ ವೃದ್ಧ ಬಾಲಸುಬ್ರಹ್ಮಣ್ಯ ಕುಮಾರ್ ಒಂದು ರಾತ್ರಿ ಪೆಟ್ಟಿಗೆಯಲ್ಲಿದ್ದ ವೃದ್ಧ ಎಂದು ಗುರತಿಸಲಾಗಿದೆ. ಸದ್ಯ ಅವರನ್ನು ಪೊಲೀಸರು ರಕ್ಷಿಸಿದ್ದು, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಕೊಡಿಸಿದ್ದಾರೆ.
ಬಾಲಸುಬ್ರಹ್ಮಣ್ಯ ಕುಮಾರ್ 70 ವರ್ಷದ ಕಿರಿಯ ಸಹೋದರ ಸರವಣನ್ ಮತ್ತು ಅವರ ಸಹೋದರಿಯ ಮಗಳು ಗೀತಾ ಅವರೊಂದಿಗೆ ವಾಸಿಸುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಬಾಲಸುಬ್ರಹ್ಮಣ್ಯ ಕುಮಾರ್ ಅವರ ಆರೋಗ್ಯ ಸರಿಯಿಲ್ಲದ ಕಾರಣ ಮಲಗಿದ್ದಲ್ಲೇ ಇದ್ದರು. ಆದರೆ ಅಕ್ಟೋಬರ್ 12ರಂದು ಅವರನ್ನು ಮೇಲಕ್ಕೆ ಏಳಿಸಲು ಪ್ರಯತ್ನಿಸಿದ್ದಾರೆ. ಆಗ ಅವರು ಎಚ್ಚರಗೊಂಡಿಲ್ಲ. ಹೀಗಾಗಿ ಸರವಣನ್ ಅವರು ತಮ್ಮ ಸಹೋದರ ಬಾಲಸುಬ್ರಹ್ಮಣ್ಯ ಸಾವನ್ನಪ್ಪಿದ್ದಾರೆಂದು ಭಾವಿಸಿದ್ದಾರೆ.
ಇದರಿಂದ ಸೋಮವಾರ ಫ್ರೀಜರ್ ಬಾಕ್ಸ್ ಕಂಪನಿಯವರನ್ನು ಕರೆದು ಅದರಲ್ಲಿ ಬಾಲಸುಬ್ರಹ್ಮಣ್ಯ ಅವರನ್ನು ಇಟ್ಟು, ಸಂಬಂಧಿಕರಿಗೂ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಂಗಳವಾರ ಸಂಜೆ ವೇಳಗೆ ಮನೆಗೆ ಸಂಬಂಧಿಕರು ಬಂದಿದ್ದಾರೆ. ಈ ವೇಳೆ ಫ್ರೀಜರ್ ಬಾಕ್ಸ್ ವಾಪಸ್ ಪಡೆಯಲು ಫ್ರೀಜರ್ ಕಂಪನಿಯವರು ಸ್ಥಳಕ್ಕೆ ಬಂದಿದ್ದಾರೆ. ಆಗ ಫ್ರೀಜರ್ ಬಾಕ್ಸಿನೊಳಗೆ ವೃದ್ಧ ಉಸಿರಾಡುತ್ತಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಫ್ರೀಜರ್ ಬಾಕ್ಸಿನಿಂದ ವೃದ್ಧನನ್ನು ಹೊರ ತೆಗೆದು ಹತ್ತಿರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜೊತೆಗೆ ಐಪಿಸಿ ಸೆಕ್ಷನ್ 287 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ನಿರ್ಲಕ್ಷ್ಯದ ವರ್ತನೆ) ಮತ್ತು ಐಪಿಸಿ ಸೆಕ್ಷನ್ 336 (ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವಂತೆ)ರ ಅಡಿಯಲ್ಲಿ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.