ಚಿತ್ರದುರ್ಗ: ಬಿಜೆಪಿ ನಾಯಕರು ರಾಜ್ಯಕ್ಕೆ ನೂರು ಸಲ ಬಂದರೂ ಪ್ರಯೋಜನ ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನರಗುಂದಕ್ಕೆ ತೆರಳುವ ವೇಳೆ ಚಿತ್ರದುರ್ಗ ಹೊರವಲಯದಲ್ಲಿ ಮಾಜಿ ಎಂಎಲ್ಸಿ ರಘು ಆಚಾರ್ ನಿರ್ಮಿಸುತ್ತಿರುವ ಮನೆಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.
ಚಿತ್ರದುರ್ಗ ಹೊರವಲಯದಲ್ಲಿ ಹೆಲಿಕಾಪ್ಟರ್ ಗೆ ಇಂಧನ ತುಂಬಿಸಲು ಇಳಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಅವರು ರಾಜ್ಯಕ್ಕೆ ನೂರು ಸಲ ಭೇಟಿ ನೀಡಿದರೂ ಉಪಯೋಗ ಆಗುವುದಿಲ್ಲ. ರಾಜ್ಯದ ಜನತೆ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ತೀರ್ಮಾನ ಮಾಡಿದ್ದಾರೆ ಎಂದರು.
ಬಿಜೆಪಿಯವರಿಗೆ ಸಿದ್ದಾಂತ ಇಲ್ಲ, ಜನರನ್ನೂ ಪ್ರಚೋಧಿಸಿ, ದ್ವೇಷದ ರಾಜಕಾರಣ ಮಾಡುವುದು, ಸಿದ್ದರಾಮಯ್ಯ ಅವರನ್ನು ಮುಗಿಸಿ ಎನ್ನುವುದು ಸಿದ್ಧಾಂತವಾ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಅವರಿಗೆ ಮಾತ್ರ ರಾಜಕೀಯ ಜ್ಞಾನ ಇಲ್ಲ ಅಂದುಕೊಂಡಿದ್ದೆ, ಈಗ ಜೆ.ಪಿ.ನಡ್ಡಾ ಅವರಿಗೂ ರಾಜಕೀಯ ಜ್ಞಾನ ಇದ್ದಂತಿಲ್ಲ ಅನ್ನಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಾವು ಯಾರ ಓಲೈಕೆಯನ್ನೂ ಮಾಡುವುದಿಲ್ಲ. ಮನುಷ್ಯತ್ವದ ರಾಜಕಾರಣ ಮಾಡುತ್ತೇವೆ. ಹಿಂದೂ, ಮುಸ್ಲಿಂ, ಎಲ್ಲರೂ ಮನುಷ್ಯರು ಎಂದು ಭಾವಿಸಿದ್ದೇವೆ ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಭಾರೀ ಅವ್ಯವಹಾರ ಆಗಿದೆ. ತನಿಖೆ ಮಾಡಿಸಿ, ಸರ್ಕಾರ ನಿಮ್ಮದೇ ಇದೆ, ನೀವೇ ಅಧಿಕಾರದಲ್ಲಿದ್ದೀರಿ, ನಿಮ್ಮ ಕೈ ಯಾರು ಹಿಡಿದಿದ್ದಾರೆ, ನಮ್ಮ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ದಾಖಲೆ ಇದ್ದರೆ ತನಿಖೆ ಮಾಡಿ. ಯಾಕೆ ಹಿಂದೇಟು ಹಾಕುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.