ಭೋಪಾಲ್: ರಾಜ್ಯದ ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಮದ್ಯ ಸೇವನೆಯನ್ನು ಕಡಿಮೆಗೊಳಿಸುವ ಪ್ರಯತ್ನದ ಭಾಗವಾಗಿ ಎಪ್ರಿಲ್ 1 ರಿಂದ ಮಧ್ಯಪ್ರದೇಶದಲ್ಲಿ ಮದ್ಯದ ಅಂಗಡಿಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಅನುಮತಿಸಲಾಗುವುದಿಲ್ಲ.
ರಾಜ್ಯ ಸಚಿವ ಸಂಪುಟವು ರವಿವಾರ ಈ ನೀತಿಗೆ ಅನುಮೋದನೆ ನೀಡಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ 2010 ರಿಂದ ಯಾವುದೇ ಮದ್ಯದ ಅಂಗಡಿಯನ್ನು ತೆರೆದಿಲ್ಲ ಎಂದು ಅವರು ಹೇಳಿದರು.
‘ಈಗ, ಮದ್ಯದ ಅಂಗಡಿಗಳಲ್ಲಿ ಮದ್ಯ ಸೇವನೆಗಾಗಿ ಯಾವುದೇ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಅನುಮತಿಸಲಾಗುವುದಿಲ್ಲ. ಅದೇ ರೀತಿ, ಶಾಲೆಗಳು, ಧಾರ್ಮಿಕ ಸ್ಥಳಗಳು ಹಾಗೂ ಹಾಸ್ಟೆಲ್‌ಗಳ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗುವುದಿಲ್ಲ” ಎಂದರು.
ಶಿಕ್ಷಣ ಸಂಸ್ಥೆಗಳು ಹಾಗೂ ಧಾರ್ಮಿಕ ಸ್ಥಳಗಳ 50 ಮೀಟರ್ ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು ತೆರೆಯಲು ಈ ಹಿಂದೆ ಅವಕಾಶವಿರಲಿಲ್ಲ.
ಕುಡಿದು ವಾಹನ ಚಲಾಯಿಸುವ ಪ್ರಕರಣಗಳಲ್ಲಿ ಚಾಲನಾ ಪರವಾನಗಿ ರದ್ದುಗೊಳಿಸುವ ನಿಬಂಧನೆಯನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದು ಮಿಶ್ರಾ ಹೇಳಿದರು. ಅಂಗಡಿಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲಾಗುವುದು ಹಾಗೂ ಮದ್ಯಪಾನ ಮಾಡುವ ಸ್ಥಳಗಳನ್ನು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದರು.