ಧಾರವಾಡ: ‘ಶಾಸ್ತ್ರೀಯ ಭಾಷೆ ಮತ್ತು ಕಲೆಗೆ ಹೆಚ್ಚಿನ ಪ್ರೋತ್ಸಾಹ ಒದಗಿಸಲಾಗುವದು’ ಎಂದು ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘಾವಲ್ ಭರವಸೆ ನೀಡಿದರು.
ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಾದೇಶಿಕ ಕಚೇರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಸಾಂಸ್ಕೃತಿಕ ಊರು ಧಾರವಾಡವನ್ನು ಮುಂದೆ ಕಲೆ ಹಾಗೂ ಸಾಂಸ್ಕೃತಿಕ ರಾಜಧಾನಿಯನ್ನಾಗಿ ಅಭುವೃದ್ಧಿಪಡಿಸಲಾಗುವುದು. ಅದಕ್ಕೆ ಅಗತ್ಯವಿರುವ ಎಲ್ಲಾ ಅಕಾಡೆಮಿಗಳ ಕಚೇರಿಯನ್ನು ಧಾರವಾಡಕ್ಕೆ ನೀಡಲಾಗುವುದು. ಮುಂದೆ ಸಂಗೀತ, ನಾಟಕ ಆಕಡೆಮಿ ಹಾಗೂ ಸಾಹಿತ್ಯ ಅಕಾಡೆಮಿ ಕಚೇರಿಯನ್ನು ನೀಡಲಾಗುವುದು’ ಎಂದರು.
‘ಶಾಸ್ತ್ರೀಯ ಭಾಷೆ ಸ್ಥಾನಮಾನದ ಕೇಂದ್ರವನ್ನು ಶೀಘ್ರದಲ್ಲಿ ರಾಜ್ಯಕ್ಕೆ ನೀಡುವ ಯೋಜನೆ ಇದೆ. ಅದಕ್ಕೆ ಸಂಬಂಧಿಸಿದ ಪ್ರಸ್ತಾವಣೆಯನ್ನು ರಾಜ್ಯ ಸರ್ಕಾರ ಕಳುಹಿಸಿಕೊಡಲಿ’ ಎಂದರು.
‘ ಡಾ. ಅಂಬೇಡ್ಕರ್ ಹಾಗೂ ರಾಮಾಭಾಯಿ ಧಾರವಾಡಕ್ಕೆ ಭೇಟಿ ನೀಡಿದ ವಸತಿ ನಿಲಯಕ್ಕೆ ಅನುದಾನ ನಿಸಲಾಗುವುದು. ಪಂ. ಪುಟ್ಟರಾಜ ಗವಾಯಿ ಸ್ಮರಣೆ ಸಂಗೀತೋತ್ಸವ ಆಯೋಜನೆ, ಧಾರವಾಡದ ಕಲಾವಿದರನ್ನು ಅಂತಾರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಸೌಲಭ್ಯ ಹಾಗೂ ಮೂಲಸೌಕರ್ಯ ಒದಗಿಸಲಾಗುವುದು’ ಎಂದರು.
‘ಜಿಲ್ಲೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ನಾಟಕ ಪ್ರದರ್ಶನಕ್ಕೆ ₹1.5ಕೋಟಿ ಹಾಗೂ ಚನ್ನಮ್ಮ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ₹5ಕೋಟಿ ಅನುದಾನ ನೀಡಲಾಗುವುದು’ ಎಂದು ಸಚಿವ ಮೇಘವಲ್ ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ನಮ್ಮ ನೈಜ ಇತಿಹಾಸ ತಿಳಿಸದ ಕೆಲವರು, ನಮ್ಮನ್ನು ಕೈಲಾಗದವರು ಎಂದೇ ಬಿಂಬಿಸುತ್ತ ಬಂದಿದ್ದಾರೆ. ಹೀಗಾಗಿ ನಾವು ಇತಿಹಾಸ ಮರೆಯುತ್ತಿದ್ದೇವೆ. ಧಾರವಾಡಕ್ಕೆ ಬರುವ ಅನೇಕ ದಿಗ್ಗಜರು, ಇಲ್ಲಿನ ಮಣ್ಣಿಗೆ ನಮಸ್ಕರಿಸುತ್ತಾರೆ. ಅದನ್ನು ಉಳಿಸಿಬೆಳೆಸುವ ಪ್ರಯತ್ನ ಮಾಡಬೇಕಿದೆ’ ಎಂದರು.