ದೆಹಲಿ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ದಿಲ್ಲಿ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ (ಫೆ.19 ರಂದು) ಸಂಜೆ ಓವೈಸಿ ಅವರ ದಿಲ್ಲಿ ನಿವಾಸದ ಮೇಲೆ ಕಿಡಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಓವೈಸಿ, ನನ್ನ ದಿಲ್ಲಿಯ ನಿವಾಸದ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ. ಇಂಥ ಘಟನೆ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ ಎಂದಿದ್ದಾರೆ.
ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ ನನ್ನ ಮನೆಗೆ ಕಿಟಕಿಯ ಗಾಜುಗಳು ಒಡೆದು ಹೋಗಿದೆ. ಪೊಲೀಸರಿಗೆ ಈ ಬಗ್ಗೆ ದೂರು ನೀಡಿ, ಆರೋಪಿಗಳ ಬಂಧನಕ್ಕೆ ಮನವಿ ಮಾಡಿದ್ದೇನೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಹೆಚ್ಚು ಭದ್ರತೆ ಇರುವ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಎಂದು ಓವೈಸಿ ಹೇಳಿದ್ದಾರೆ.
ದಿಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಘಟನೆ ನಡೆಯುವ ಸಮಯದಲ್ಲಿ ಓವೈಸಿ ದಿಲ್ಲಿಯಲ್ಲಿ ಇರಲಿಲ್ಲ ಎಂದು ವರದಿ ತಿಳಿಸಿದೆ.
Laxmi News 24×7