ರಾಮದುರ್ಗ: ‘ಬಿಜೆಪಿ ಎಂದರೆ ಸುಳ್ಳಿನ ಪಕ್ಷ. ಪಕ್ಷದ ನಾಯಕರು ಕೋಮುದ್ವೇಷ ಬಿತ್ತುತ್ತಿದ್ದಾರೆ. ಇಂಥವರು ಅಧಿಕಾರದಲ್ಲಿರಲು ಯೋಗ್ಯರಲ್ಲ. ಇವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.
ರಾಮದುರ್ಗದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್‌ನ ಪ್ರಜಾಧ್ವನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪಕ್ಷದ ಅಧ್ಯಕ್ಷನಾಗಿರುವ ನಳೀನ್‌ಕುಮಾರ ಕಟೀಲ್ ಟಿಪ್ಪುವಿನ ಅಂತ್ಯ ಹಾಡಿದಂತೆ ಸಿದ್ದರಾಮಯ್ಯಗೂ ಅಂತ್ಯ ಹಾಡಲಾಗುವುದು ಎಂದು ಹೇಳಿರುವುದನ್ನು ಎಲ್ಲರೂ ಖಂಡಿಸಬೇಕು’ ಎಂದು ಹೇಳಿದರು.
‘ಬಿಜೆಪಿ ನಾಯಕರಿಗೆ ಕ್ರಿಮಿನಲ್‌ಬ್ರೇನ್ ಕೆಲಸ ಮಾಡುತ್ತಿದೆ. ಮಿದುಳಿಗೂ ನಾಲಿಗೆಗೂ ಸಂಪರ್ಕ ಇಲ್ಲದಂತಾಗಿದೆ. ಹೀಗಾಗಿ ಷಡ್ಯಂತ್ರಗಳಿಗೆ ಹೆದರುವ ವ್ಯಕ್ತಿ ನಾನಲ್ಲ. ಮುಂದಿನ ಚುನಾವಣೆಯಲ್ಲಿ ಇಂತ ಕೋಮುವಾದಿಗಳಿಗೆ ಮತ ನೀಡಬಾರದು. ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
‘ರಾಜ್ಯದ ವಾರ್ಷಿಕ ಆದಾಯ ₹2,65,720 ಕೋಟಿಯಾಗಿದೆ. ಅದರಲ್ಲಿ ರೈತರ, ಬಡವರ, ನಿರ್ಗತಿಕರ ಮತ್ತು ದಲಿತರ ಏಳ್ಗೆಗಳಿಗೆ ಯೋಜನೆಗಳನ್ನು ರೂಪಿಸಬೇಕು. ಅದಾವುದನ್ನು ಮಾಡದ ಬಿಜೆಪಿ ಲವ್‌ಜಿಹಾದ್ ಬಗ್ಗೆ ಜನರ ಮನಸ್ಸು ಕೆಡಿಸುತ್ತಿದ್ದಾರೆ. ಇಂತವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ತಿಳಿಸಿದರು.
‘ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಮದುರ್ಗ ತಾಲ್ಲೂಕಿನ ಎರಡು ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿತ್ತು. ಇದಕ್ಕೆ ಅಂದಿನ ಶಾಸಕ ಅಶೋಕ ಪಟ್ಟಣ ಬೆಂಬತ್ತಿದ್ದರು. ಈಗಿನ ಬಿಜೆಪಿ ಶಾಸಕರು ಎಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ ಎಂದು ಜನತೆ ತುಲನೆ ಮಾಡಬೇಕು’ ಎಂದು ಹೇಳಿದರು.
ಸಿಡಬ್ಲೂಸಿ ಸದಸ್ಯ ಎಚ್.ಕೆ ಪಾಟೀಲ ಮಾತನಾಡಿ, ಮುಂದಿನ ವಿಧಾನ ಸಭೆ ಚುನಾವಣೆಯು ಬಿಜೆಪಿ, ಜೆಡಿಎಸ್ ವಿರುದ್ಧ ಅಲ್ಲ. ದೇಶದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಗೆಲ್ಲುವುದು ಅಷ್ಟೆ ಸತ್ಯವಾಗಿದೆ ಎಂದರು