ಬೆಂಗಳೂರು : ‘ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಸದನದಲ್ಲಿ ಕಲಿಯಬೇಕು, ನಿಮ್ಮ ನಡೆ ಸರಿಯಲ್ಲ, ಜವಾಬ್ದಾರಿ ಸ್ಥಾನದಲ್ಲಿ ಕುಳಿತಿರುವಾಗ ಅದನ್ನು ನಿಭಾಯಿಸಬೇಕು.
. .’
-ಇದು ವಿಧಾನ ಪರಿಷತ್‌ನಲ್ಲಿ ಪಶುಸಂಗೋಪನಾ ಸಚಿವ ಪ್ರಭು ಬಿ. ಚವ್ಹಾಣ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ ಪಾಠ.
ಕಲಾಪ ಬುಧವಾರ ಬೆಳಿಗ್ಗೆ ಆರಂಭವಾಗುತ್ತಿದ್ದಂತೆ ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ, ರಾಜ್ಯದಿಂದ ಗೋವಾಕ್ಕೆ ಎಷ್ಟು ಪ್ರಮಾಣದಲ್ಲಿ ದನದ ಮಾಂಸ ರಫ್ತಾಗುತ್ತಿದೆ ಎನ್ನುವ ಕುರಿತು ಫೆ. 4ರಂದೇ ಪ್ರಶ್ನೆ ಕಳುಹಿಸಲಾಗಿದೆ. ಆದರೆ, ಇಲ್ಲಿಯವರೆಗೂ ಉತ್ತರ ನೀಡಿಲ್ಲ. ಉತ್ತರ ನೀಡಿದ ನಂತರ ಮುಂದಿನ ಕಲಾಪಗಳಿಗೆ ಅವಕಾಶ ಕೊಡಬೇಕು ಎಂದು ಪಟ್ಟುಹಿಡಿದರು.
ಆಗ ಭೋಜೇಗೌಡರ ನೆರವಿಗೆ ಬಂದ ಸಭಾಪತಿ, ‘ಸದಸ್ಯರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕು. ನಿಮಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲವೇ, ಇದು ಸರಿಯಲ್ಲ. ಸದನ ಮುಗಿಯುವ ಮೊದಲು ಉತ್ತರ ಕೊಡಬೇಕು’ ಎಂದು ತಾಕೀತು ಮಾಡಿದರು.
‘ಅಂಬೇಡ್ಕರ್ ವಸತಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧ’
‘ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಮಸಾಲ ಜಯರಾಂ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ ಒಟ್ಟು 830 ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿವೆ. ಈ ಪೈಕಿ, 240 ಶಾಲೆಗಳು ಬಾಡಿಗೆ ಕಟ್ಟಡಗಳಲ್ಲಿವೆ. ಅವುಗಳ ನಿರ್ವಹಣೆಗೆ ಈಗಾಗಲೇ ₹ 700 ಕೋಟಿ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು’ ಎಂದರು.