(ಬೆಳಗಾವಿ): ಒಂದೆಡೆ ಮಹಿಳೆಯರ ಪೂರ್ಣಕುಂಭ ಮೆರವಣಿಗೆ ಕಣ್ಮನ ಸೆಳೆದರೆ, ಮತ್ತೊಂದೆಡೆ ಮಕ್ಕಳ ಜಾನಪದ ಕಲೆಗಳ ಪ್ರದರ್ಶನ ಜನರನ್ನು ರಂಜಿಸಿತು. ಆಲಂಕೃತ ಚಕ್ಕಡಿಗಳು, ಟ್ರ್ಯಾಕ್ಟರ್‌ಗಳ ಸಾಲು ಗ್ರಾಮೀಣ ಸೊಗಡು ಸೂಸಿತು. ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಮಿಂದೆದ್ದರೆ, ನೂರಾರು ಮಕ್ಕಳು ತಮ್ಮ ಪ್ರತಿಭೆ ಅನಾವರಣಗೊಳಿಸಿ ಬೀಗಿದರು.
ಮಾಸ್ತಮರ್ಡಿಯಲ್ಲಿ ಸೋಮವಾರದಿಂದ ಆರಂಭಗೊಂಡ ಬೆಳಗಾವಿ ಶೈಕ್ಷಣಿಕ ಜಿಲ್ಲಾಮಟ್ಟದ ‘ಮಕ್ಕಳ ಕಲಿಕಾ ಹಬ್ಬ’ದಲ್ಲಿ ಇಂತಹ ದೃಶ್ಯಕಾವ್ಯಕ್ಕೆ ಸಾಕ್ಷಿಯಾಯಿತು.
ಮಕ್ಕಳಲ್ಲಿ ಕಲಿಕೆ ಬಗ್ಗೆ ಪ್ರೇರಣೆ ತುಂಬಲು ಆಯೋಜಿಸಿದ್ದ ಈ ಶೈಕ್ಷಣಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ‘ಶೈಕ್ಷಣಿಕ ಹಬ್ಬ’ ಜಾತ್ರೆ ಸ್ವರೂಪ ಪಡೆದುಕೊಂಡಿತ್ತು.
ಇಲ್ಲಿನ ಬಸವೇಶ್ವರ ದೇವಸ್ಥಾನದ ಬಳಿ ಸಂಸದೆ ಮಂಗಲಾ ಮಂಗಲಾ ಅಂಗಡಿ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣ ತಲುಪಿತು.
ಜಿಲ್ಲೆಯ ವಿವಿಧ ಶಾಲೆಗಳಿಂದ ಬಂದಿದ್ದ ಮಕ್ಕಳು ಕೋಲಾಟ, ಲೇಜಿಮ್, ಡೊಳ್ಳುಕುಣಿತ, ಭಜನೆ, ಜಾಂಝ್‌ಪಥಕ್, ಸಂಗ್ರಾಮ ಗೀತೆ, ಕುದುರೆ ಕುಣಿತ ಮತ್ತಿತರ ಕಲಾ ಪ್ರಕಾರ ಪ್ರದರ್ಶಿಸಿದರು. ವಿವಿಧ ಮಹಾನ್ ನಾಯಕರ ವೇಷಭೂಷಣಗಳಲ್ಲಿ ಗಮನಸೆಳೆದರು.
ಇಲ್ಲಿನ ಮುಖ್ಯರಸ್ತೆಗಳಲ್ಲಿ ರಂಗೋಲಿ ಚಿತ್ತಾರ ಅರಳಿತ್ತು. ಶಾಲೆಗಳ ಆವರಣವನ್ನು ತಳಿರು-ತೋರಣದಿಂದ ಸಿಂಗರಿಸಿದ್ದ ಗ್ರಾಮಸ್ಥರು, ವೇದಿಕೆಗೆ ಸ್ವತಃ ಶಾಮಿಯಾನ ಹಾಕಿದ್ದರು. ಇದೇ ವೇದಿಕೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮ ನೆರವೇರಿದವು.
ವಿವಿಧ ಚಟುವಟಿಕೆ: ಮಾಡು-ಆಡು, ಹಾಡು-ಆಡು, ಕಾಗದ-ಕತ್ತರಿ, ಊರು ತಿಳಿಯೋಣ ಎಂಬ ನಾಲ್ಕು ವಿಭಾಗಗಳಲ್ಲಿ ವಿವಿಧ ಚಟುವಟಿಕೆ ನಡೆದವು. ಬೇರೆ ತಾಲ್ಲೂಕುಗಳಿಂದ ಬಂದಿದ್ದ 150 ವಿದ್ಯಾರ್ಥಿಗಳು, ‘ಅತಿಥಿ-ಆತಿಥ್ಯ’ ಪರಿಕಲ್ಪನೆಯಡಿ ಸ್ಥಳೀಯ ವಿದ್ಯಾರ್ಥಿಗಳ ಮನೆಯಲ್ಲೇ ವಾಸ್ತವ್ಯ ಹೂಡಿದರು. ವಿದ್ಯಾರ್ಥಿಗಳು ಪರಸ್ಪರ ಶೈಕ್ಷಣಿಕ ಸಂಗತಿ ಹಂಚಿಕೊಂಡು ಸಂಭ್ರಮಿಸಿದರು.